ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ; ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ: ಬಿಇಓ ಪಿ.ಬಿ. ಮದಭಾವಿ
ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ;
ಕಾಗವಾಡ 09: ಕ್ರೀಡೆಯಲ್ಲಿ ಸೋಲು-ಗೆಲವು ಅನಿಶ್ಚಿತವಾಗಿದ್ದು, ಗೆಲುವಿನ ಸಂಭ್ರಮ, ಸೋಲಿನ ದುಃಖ ಕ್ಷಣಿಕವಾಗಿವೆ. ವಿದ್ಯಾರ್ಥಿಗಳು ಸೋಲನ್ನು ಸವಾಲಾಗಿ ಸ್ವೀಕರಿಸಿ, ಜೀವನದಲ್ಲಿ ಯಶಸ್ವಿಯಾಗಬೇಕೆಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಮದಭಾವಿ ಹೇಳಿದ್ದಾರೆ.
ಅವರು, ಮಂಗಳವಾರ ದಿ. 09 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದ ಶ್ರೀ ಹರಿ ವಿದ್ಯಾಲಯದದ ಮೈದಾನದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಉಗಾರ ಶ್ರೀಹರಿ ವಿದ್ಯಾಲಯ ಇವರ ಸಹಯೋಗದಲ್ಲಿ 2025-26 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ತಾಲೂಕ ಮಟ್ಟದ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರೀಡೆಗಳಲ್ಲಿ ಸೋಲು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗಿದೆ. ಜೀವನದಲ್ಲಿ ಅದ್ಭುತ ಸಾಧನೆ ಮಾಡಿದವರೆಲ್ಲರೂ ಸೋಲನ್ನು ಅನುಭವಿಸಿದವರೇ ಆಗಿದ್ದಾರೆ. ಕಾರಣ ಸೋಲನ್ನು ವಿನಮ್ರವಾಗಿ ಸ್ವೀಕಾರ ಮಾಡಬೇಕು. ಸೋಲಿನ ಅಂಚಿನಲ್ಲಿಯೇ ಗೆಲುವು ಇದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಇಂದಿನ ಕ್ರೀಡೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿ ತಾಲೂಕಿನ ಕೀರ್ತಿ ಹೆಚ್ಚಿಸಿ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಶಿರಗಾಂವಕರ ಶಿಕ್ಷಣ ಸಂಸ್ಥೆಯ ರಾಜೇಂದ್ರ ಬೆಳ್ಳಂಕೆ ಮಾತನಾಡಿದರು. ಈ ವೇಳೆ ದೈಹಿಕ ಪರೀವಿಕ್ಷಕ ಎಮ್.ವೈ. ಪೂಜಾರಿ, ಸಿ.ಎಂ. ಸಂತೋಷ್, ಎಂ.ಜಿ. ಸಂಕಪಾಳ, ಎಸ್.ಎಸ್. ಭಾವಿ, ಡಿ.ಆರ್. ನಾಯಿಕ, ಎಲ್.ಕೆ. ಅರವಾಡಿ, ಎ.ಎಸ್. ಪಾಟೀಲ್, ಬಿ.ಎಲ್. ಸಾಂಗಾವೆ, ಕೆ.ವ್ಹಿ. ಕಾಂಬಳೆ, ಸತೀಶ ಜಗತಾಪ್, ಎಸ್.ಆರ್. ಮಾಳಿ, ಸಿದ್ದಲಿಂಗ ಪೂಜಾರಿ, ಕುಮಾರ ಗಾಣಿಗೇರ, ರವಿ ಗಾಣಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.