ಪ್ರಾಮಾಣಿಕವಾಗಿ ಸೇವೆಯಿಂದ ತಮ್ಮ ಋಣ ಭಾರ ಕಡಿಮೆ ಮಾಡಿಕೊಳ್ಳುತ್ತೇನೆ: ವೈದ್ಯ
ಲೋಕದರ್ಶನ ವರದಿ
ಸವದತ್ತಿ 12: ಮತಕ್ಷೇತ್ರದ ಜನರು ನನಗೆ ನೀಡಿದ ಶಾಸಕ ಸ್ಥಾನಕ್ಕೆ ನಾನು ನನ್ನ ಉಸಿರಿರುವವರೆಗೆ ಜನರಿಗೆ ಚಿರ ಋಣಿಯಾಗಿದ್ದು, ಪ್ರಾಮಾಣಿಕವಾಗಿ ತಮ್ಮೆಲ್ಲರ ಸೇವೆಯನ್ನು ಮಾಡುವ ಮೂಲಕ ತಮ್ಮ ಋಣ ಭಾರವನ್ನು ಕಡಿಮೆ ಮಾಡಿಕೊಳ್ಳುವದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಗಾಂಧಿಚೌಕದಲ್ಲಿ ನಾಡ ಹಬ್ಬ ಉತ್ಸವ ಸಮಿತಿ, ಗಜಾನನ ಯುವಕ ಮಂಡಳ, ಗಾಂಧಿಚೌಕದ ವ್ಯಾಪಾರಸ್ಥರೆಲ್ಲರೂ ಸೇರಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವದರ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಎಲ್ಲ ಉನ್ನತ ಶಿಕ್ಷಣವನ್ನು ದೊರಕಿಸಿಕೊಡುವಂತ ವ್ಯವಸ್ಥೆ ಹಾಗೂ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನವನ್ನು ಮಾದರಿ ದೇವಸ್ಥಾನವನ್ನು ಮಾಡುವ ಕನಸು ನನ್ನದಾಗಿದೆ. ಇವೆಲ್ಲ ಕೆಲಸವನ್ನು ಕಾರ್ಯರೂಪಕ್ಕೆ ತಂದು ತಮ್ಮ ಮುಂದೆ ನಾನು ಬರುತ್ತೇನೆ ಎಂದರು.
51 ವರ್ಷಗಳ ಹಿಂದೆ ಅಂದಿನ ಜನಸಂಖ್ಯೆಗನುಗುಣವಾಗಿ ಪಟ್ಟಣದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಜಾಕ್ವೆಲ್ ಬಗ್ಗೆ ಇದುವರೆಗೆ ಯಾರೂ ಕಾಳಜಿ ವಹಿಸದೆ ಇರುವದರಿಂದ ಪಟ್ಟಣದ ಜನತೆಗೆ ಇಂದು ನೀರಿನ ಸಮಸ್ಯೆಯಾಗುತ್ತಿದ್ದು, ಜೂ.13ರಂದು ಈ ಜಾಕವೆಲ್ನಲ್ಲಿ ಹೊಸ ತಂತ್ರಜ್ಞಾನದ ಮೂಲಕ ಸ್ವಚ್ಚಗೊಳಿಸಿ ವಾರಕ್ಕೊಮ್ಮೆ ಪೂರೈಕೆಯಾಗುತ್ತಿರುವ ನೀರಿನ ವ್ಯವಸ್ಥೆಯನ್ನು ಬದಲಿಸಿ ಮೂರು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸುವಂತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.
ಸುನೀಲ ಸುಳ್ಳದ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಹೊಸ ಹೊಸ ಕೈಗಾರಿಕೋದ್ಯಮವನ್ನು ಸ್ಥಾಪಿಸುವದರ ಜೊತೆಗೆ ಕ್ಷೇತ್ರದ ಆಥರ್ಿಕ ಅಭಿವೃದ್ದಿ ಹಾಗೂ ನಿರುದ್ಯೋಗ ಸಮಸ್ಯೆಗಳಿಗೆ ಶಾಸಕರು ಸ್ಪಂಧನೆ ನೀಡಬೇಕೆಂದರು. ನಿಂತು ಹೋಗಿರುವಂತ ಮಲಪ್ರಭಾ ನೂಲಿನ ಗಿರಣಿಗೆ ಪುನಶ್ಚೇತನ ನೀಡುವ ಮೂಲಕ ಅದಕ್ಕೆ ಜೀವ ತುಂಬುವ ಕೆಲಸವನ್ನು ಶಾಸಕರು ಮಾಡಬೇಕೆಂದರು. ಏತ ನೀರಾವರಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವಂತ ಕಾರ್ಯವನ್ನು ಶಾಸಕರಿಂದಾದರೆ ಅನ್ನ ನೀಡುವ ರೈತರ ಬಾಳು ಹಸನಾಗಲು ಸಾಧ್ಯ ಎಂದರು.
ಬಸವಪ್ರಭು ಪ್ರಭುನವರ, ಚಂದ್ರಣ್ಣ ಶಾಮರಾಯನವರ, ಉಮೇಶ ಸುಳ್ಳದ, ಬಸವರಾಜ ಹಂಪಣ್ಣವರ, ಸಿಪಿಐ ಕರುಣೇಶಗೌಡ, ಬಸವರಾಜ ಅತ್ತಿಗೇರಿ, ಸೋಮಯ್ಯ ವಡಿಯರ, ಮದನಲಾಲ ಚೋಪ್ರಾ, ಅರುಣ ಅಮ್ಮಿನಭಾವಿ, ರಾಜು ಪಟ್ಟಣಶೆಟ್ಟಿ, ರಾಮಣ್ಣ ರಾಮಪ್ಪನವರ, ಭಾಗೀರಥಿಭಾಯಿ ಹಿರೇಮಠ ಉಪಸ್ಥಿತರಿದ್ದರು.ಶ್ರೀಧರ ಆಸಂಗಿಹಾಳ ನಿರೂಪಿಸಿದರು.