ಶಿಗ್ಗಾವ್

ಯಾರಗಾತಾರೇ ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು..?

ಯಾರಗಾತಾರೇ ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು..?

ಸುಧಾಕರ ದೈವಜ್ಙ 

ಶಿಗ್ಗಾವಿ 12:  ರಾಜ್ಯ ಸರ್ಕಾರದಿಂದ ಸ್ಥಳೀಯ ಆಡಳಿತಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಪಟ್ಟಣದ ಪುರಸಭೆ ಆಡಳಿತಕ್ಕೆ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಗರಿಗೆದರುತ್ತಿವೆ. 

ಹಾವೇರಿ ಜಿಲ್ಲೆಯಲ್ಲಿಯೇ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯ ಜೊತೆಗೆ ಸ್ಥಳೀಯ ಆಡಳಿತವನ್ನು ತನ್ನಲ್ಲಿಯೆ ಉಳಿಸಿಕೊಳ್ಳುವ ಪ್ರಯತ್ನ ಬಿಜೆಪಿ ನಾಯಕರು ನಡೆಸುತ್ತಿದ್ದರೆ. ಮತ್ತೊಂದೆಡೆ ಆಡಳಿತರೂಢ ಕಾಂಗ್ರೆಸ್ ಪಕ್ಷ ಉಪಚುನಾವಣೆಯ ಜೊತೆಗೆ ಸ್ಥಳೀಯ ಆಡಳಿತವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಹಲವು ಆಯಾಮಗಳ ಮೂಲಕ ರಾಜಕೀಯ ನಡೆಸುತ್ತಿದ್ದು ಎರಡು ಪಕ್ಷಗಳಿಗೆ ಪುರಸಭೆ ಆಡಳಿತದ ಜೊತೆಗೆ ಕ್ಷೇತ್ರ  ಪ್ರತಿಷ್ಠೆಯಾಗಿದೆ.  

ಸಂಸದರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾದ ಕ್ಷೇತ್ರದ ಉಪಚುನಾವಣೆಗೆ ಎರಡು ರಾಷ್ಟ್ರೀಯ ಪಕ್ಷಗಳ ಪ್ರಚಾರ ಬಿರುಸುಗೊಂಡ ಬೆನ್ನಲ್ಲೆ ಸ್ಥಳೀಯ ಆಡಳಿತಕ್ಕೆ ಮೀಸಲಾತಿ ನಿಗದಿಯಾಗಿರುವುದು ಮತ್ತಷ್ಟು ರಾಜಕೀಯ ಚಟುವಟಿಕೆಗಳು ಜೋರಾಗಿಯೇ ನಡೆಯುತ್ತಿವೆ. 

23 ಸದಸ್ಯ ಬಲವನ್ನು ಹೊಂದಿರುವಂತಹ ಪುರಸಭೆ ಆಡಳಿತ ಅತಂತ್ರ ಸ್ಥಿತಿಯಲ್ಲಿದ್ದರೂ ಸಹ ಬೊಮ್ಮಾಯಿ ತಂತ್ರಗಾರಿಕೆಯಿಂದ ಮೊದಲ ಅವಧಿ ಆಡಳಿತ ನಡೆಸಿದ್ದು, ಶಿಗ್ಗಾವಿ ಕ್ಷೇತ್ರಕ್ಕೆ ಶಾಸಕರಾಗಿ ಬಸವರಾಜ ಬೊಮ್ಮಾಯಿ ಬಂದ ನಂತರದ ದಿನಗಳಿಂದ ಇಲ್ಲಿನ ಪುರಸಭೆಗೆ ಬಹುತೇಕ ಬಿಜೆಪಿ ವಶದಲ್ಲಿಯೇ ಅಡಳಿತ ನಡೆಸಿದ್ದು ಇತಿಹಾಸ. ಈಗ ಬಸವರಾಜ ಬೊಮ್ಮಾಯಿ ಹಾವೇರಿ ಗದಗ ಸಂಸದರಾಗಿ ಆಯ್ಕೆಯಾಗಿದ್ದು ಕ್ಷೇತ್ರದಲ್ಲಿ ತಮ್ಮ ಉತ್ತರಾಧಿಕಾರಿ ತಮ್ಮ ಪುತ್ರನೊ ಅಥವಾ ಬೆಂಬಲಿಗರೊ ಎನ್ನುವುದು ಮಾತ್ರ ಗೌಪ್ಯವಾಗಿದ್ದು ಚದುರಂಗದಾಟ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದ್ದು ಎರಡನೇ ಅವಧಿಯ ಆಡಳಿತ ಯಾರ ಪಾಲಾಗಲಿದೆ ಎಂದು ಸಾರ್ವಜನಿಕವಾಗಿ ಬಹಳ ಚರ್ಚೆ ನಡೆಯುತ್ತಿದೆ. 

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗ.(ಬಿಸಿಎ). ಮೀಸಲಾತಿ ಬಿಡುಗಡೆಯಾಗಿದ್ದು, 9.ಬಿಜೆಪಿ ಸದಸ್ಯರು, 6.ಕಾಂಗ್ರೆಸ್ ಸದಸ್ಯರನ್ನು ಒಳಗೊಂಡಂತೆ 8 ಜನ ಪಕ್ಷೇತರ ಸದಸ್ಯರೊಂದಿಗೆ 23 ಸದಸ್ಯ ಬಲವನ್ನು ಪುರಸಭೆ ಹೊಂದಿದ್ದು. ತಂತ್ರಗಾರಿಕೆ, ಕುದುರೆ ವ್ಯಾಪಾರ ಜೋರಾಗುತ್ತಿದ್ದು ಪಕ್ಷೇತರರ ಡಿಮಾಂಡ್ ಕೂಡಾ ಹೆಚ್ಚಾಗುತ್ತಿದೆ. ಪುರಸಭೆ ಸದಸ್ಯರ ಪೈಕಿ ಮೂರನೇ ಒಂದು ಭಾಗದಷ್ಟು ಪಕ್ಷೇತರರನ್ನೇ ಹೊಂದಿರುವದು ಪಕ್ಷೇತರರ ಬೇಡಿಕೆಯು ಹೆಚ್ಚಾಗುತ್ತಿದ್ದು ಅಧಿಕಾರದ ಅದೃಷ್ಟದ ಮಾಲೆ ಯಾರ ಕೊರಳಿಗೆ ಎಂಬುದು ಕುತೂಹಲವಾಗಿದೆ. 

ಕಳೆದ ಮೂರು ಅವಧಿಗೆ ಪುರಸಭೆಗೆ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ಸದಸ್ಯರ ಪೈಕಿ ಶ್ರೀಕಾಂತ ಬುಳ್ಳಕ್ಕನವರ, ಸುಭಾಷ ಚೌಹಾಣ, ಪರಶುರಾಮ ಸೊನ್ನದ  ಇವರು ಈಗಾಗಲೇ ಅಧ್ಯಕ್ಷರಾಗಿ ಪುರಸಭೆ ಆಡಳಿತ ನಡೆಸಿದ್ದಾರೆ. ಆದರೂ ಬೊಮ್ಮಾಯಿ ಮತ್ತು ಜೋಶಿ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದು ಶಿಗ್ಗಾವಿಯ ಲ್ಯಾಂಡ್ ಲಾರ್ಡ್‌ ಸಿದ್ದಾರ್ಥಗೌಡ್ರ ಪಾಟೀಲ ಉಪಚುನಾವಣೆಯ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದು ಎಂ.ಎಲ್‌.ಎ ಟಿಕೇಟ ಕೊಡಿಸಿರಿ ಅಥವಾ ಪುರಸಭೆ ಅಧ್ಯಕ್ಷ ಮಾಡಿರಿ ಎಂದು ನಾಯಕರಿಗೆ ಪ್ರಶ್ನೀಸಬಹುದು ಮತ್ತು ದಯಾನಂದ ಅಕ್ಕಿ, ಶಾಂತಾಬಾಯಿ ಸುಭೇದಾರ, ಮಂಜುನಾಥ ಬ್ಯಾಹಟ್ಟಿ ಸೇರಿದಂತೆ ಪಕ್ಷೇತರರಾಗಿ ಆಯ್ಕೆಯಾಗಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿರುವ ರಮೇಶ ವನಹಳ್ಳಿ ಮತ್ತು ಜ್ಯೋತಿ ಕೊಟ್ರ​‍್ಪ ನಡೂರ ಪುರಸಭೆ ಗದ್ದುಗೆಗಾಗಿ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.  

ಮತ್ತೊಂದಡೆ 6 ಆರು ಕಾಂಗ್ರೆಸ್ ಸದಸ್ಯರು, 8 ಜನ ಪಕ್ಷೇತರ ಸದಸ್ಯರೊಂದಿಗೆ ಹೊಂದಾಣಿಕೆ ಮೂಲಕ ಅಧಿಕಾರ ನಡೆಸಲು ಹೊಂದಿಕೊಂಡರು ಅಚ್ಚರಿ ಪಡೆಯಬೇಕಿಲ್ಲ. ವರ್ಷಗಳಿಂದಲೂ ಆಡಳಿತವಿಲ್ಲದೆ ಸೊರಗಿರುವ ಪುರಸಭೆ ಆಡಳಿತ ಬಿಜೆಪಿ ಸದಸ್ಯರ ಅಥವಾ ಪಕ್ಷೇತರ ಸದಸ್ಯರ ಪಾಲಾಗಲಿದೆಯೋ ಅಥವಾ ಅಚ್ಚರಿಯಂತೆ ಕಾಂಗ್ರೆಸ್ ಸದಸ್ಯರಿಗೆ ಒಲಿಯಲಿದೆಯೋ ಕಾದು ನೋಡಬೇಕಿದೆ. 


ಸುದ್ದಿ ಓದಿ