ತುಂಬಿ ತುಳುಕುತ್ತಿರುವ ಚರಂಡಿಗಳಿಗೆ ಮುಕ್ತಿ ಯಾವಾಗ ?
ಹತ್ತರಗಿ: ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದಾದಬಾನಹಟ್ಟಿ, ಯಮಕನಮರಡಿ ಮುಖ್ಯ ರಸ್ತೆ ಪಕ್ಕದಲ್ಲಿರುವ ಚರಂಡಿಗಳು ನಿರಂತರ ತುಂಬಿ ತುಳುಕುತ್ತಲೇ ಇರುತ್ತವೆ. ಅಲ್ಲದೇ ಈ ಚರಂಡಿ ನೀರು ಸಾರ್ವಜನಿಕರು ಸಂಚಾರ ಮಾಡುವ ರಸ್ತೆಯ ಮೇಲೆ ಸರಾಗವಾಗಿ ಹರಿಯುತ್ತಲೇ ಇರುತ್ತದೆ. ಈ ಕುರಿತು ಸಾರ್ವಜನಿಕರು ಅಪಾರ ಪಾದಚಾರಿಗಳು ಹಿಡಿಶಾಪ ಹಾಕಿದರೂ ಸಂಬಂಧಪಟ್ಟ ಆರೋಗ್ಯ ಅಧಿಕಾರಿಯಾಗಲೀ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಲೀ ಜನಪ್ರತಿನಿಧಿಗಳಾಗಲೀ ಅಲ್ಲದೇ ಪ್ರತಿ ವಾರಕ್ಕೊಮ್ಮೆ ಈ ರಸ್ತೆ ಮುಖಾಂತರ ಸಂಚರಿಸುವ ಪ್ರತಿಷ್ಠಿತ ರಾಜಕಾರಣಿಗಳ ಆಪ್ತಸಹಾಯಕರು ಸಹಿತ ಇತ್ತ ಕಡೆ ಲಕ್ಷ ಹರಿಸದೇ ಇರುವುದು ವಿಷಾದನೀಯ ಸಂಗತಿ. ಈ ಚರಂಡಿಗಳು ನಿರ್ಮಾಣವಾಗಿ ಸುಮಾರು 30 ವರ್ಷಗಳಾಗಿರಬಹುದು ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಈ 30 ವರ್ಷಗಳ ಅವಧಿಯಲ್ಲಿ ಗ್ರಾಮ ಪಂಚಾಯತ ಚುನಾವಣೆಗಳು, ತಾಲೂಕಾ/ಜಿಲ್ಲಾ ಪಂಚಾಯತ ಚುನಾವಣೆಗಳು, ಹಾಗೂ ಎಮ್.ಎಲ್.ಎ ಚುನಾವಣೆಗಳು ಜರುಗಿದರೂ ಸಹಿತ ಇಲ್ಲಿಯವರೆಗೆ ಈ ರಸ್ತೆಯ ಪಕ್ಕದಲ್ಲಿಯ ಚರಂಡಿಗಳು ಅಭಿವೃದ್ಧಿ ಹೊಂದದೆ ಹಾಗೇ ಉಳಿದಿವೆ. ಮಾತಿನಲ್ಲಿ ಮಾತ್ರ ಅಭಿವೃದ್ಧಿ ಹರಿಕಾರ, ಕೃತಿಯಲ್ಲಿ ಮಾತ್ರ ಜನರಿಂದ ಸಂಪೂರ್ಣ ಧಿಕ್ಕಾರ ಈ ಕುರಿತು ಜನರು ಬರುವ ಚುನಾವಣೆಯನ್ನು ಕಾದುನೋಡುತ್ತಾ ಕುಳಿತಿದ್ದೇವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಹತ್ತರಗಿ ಗ್ರಾಮ ಪಂಚಾಯತಿ ಸದಸ್ಯರಾದ ಮಹಾದೇವ ಸಿದ್ದಪ್ಪಾ ಮಜತಿ ಇವರು ನೇರವಾಗಿ ಆರೋಪಿಸಿದ್ದಾರೆ