ಮನಸ್ಸು ಶುದ್ಧವಾದಾಗ ಶಾಂತಿ- ನೆಮ್ಮದಿ ಸಿಗುವುದು: ಗುರು ನಾಗರಾಜಾನಂದ ಶ್ರೀ
ಲೋಕದರ್ಶನ ವರದಿ
ರಾಣಿಬೆನ್ನೂರ: ಮನುಜನು ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ ಶುದ್ಧವಾಗಿರುವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ ಹಾಗೂ ಸಂತೃಪ್ತಿ ಮತ್ತು ಮುಕ್ತಿ ಸಿಗುವುದಿಲ್ಲ ಎಂದು ಮಾಕನೂರ ಸಿದ್ಧಾರೂಢ ಮಠದ ಪೀಠಾಧಿಪತಿ ಗುರು ನಾಗರಾಜಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಮಾಕನೂರ ಸಿದ್ಧಾರೂಢ ಮಠದಲ್ಲಿ ಗುರುವಾರ ನಡೆದ ಸತ್ಸಂಗದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಮನಸ್ಸು, ಬುದ್ದಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸದ್ಗುರುವಿನ ಉಪದೇಶವನ್ನು ಆಲಿಸಿದಾಗಲೇ ಮನುಜ ಸದ್ಗತಿಯನ್ನು ಪಡೆಯಲು ಸಾಧ್ಯ ಎಂದು ನುಡಿದರು.
ಶಿವಾವತಾರಿ ಭೂಲೋಕವಾಸಿಯಾದ ಸಿದ್ಧಾರೂಢರು ಸರ್ವ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮ ಸಿದ್ಧಾರೂಢರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ, ಅಲ್ಲದೆ ಸತ್ಸಂಗವು ಜನ್ಮಜನ್ಮಾಂತರ ಪಾಪಕರ್ಮಗಳು ನಾಶವಾಗಿ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದು ಶ್ರೀಗಳು ನುಡಿದರು.
ಪ್ರತಿಯೊಬ್ಬ ಮನುಷ್ಯನಲ್ಲಿ ಮನೆ ಮಾಡಿಕೊಂಡಿರುವ ದುಷ್ಠಗುಣಗಳನ್ನು ಸಂಹರಿಸಿ ಸುಗುಣವಂತರನ್ನಾಗಿಸುವ ಮಾರ್ಗವೆ ಸತ್ಸಂಗ, ಹೋಗುತಿಹುದು ಕಾಯ ವ್ಯರ್ಥ ಅದರ ಲಾಭ ತಿಳಿದವ ಯೋಗಿ ಸಮರ್ಥ. ಭಕ್ತಿ, ಜ್ಞಾನ, ವೈರಾಗ್ಯ ಮೋಕ್ಷ ಸಂಪಾದನೆಯ ಮಾರ್ಗಗಳಾದರೆ, ದೀನ, ದಲಿತರ, ಅನಾಥರ ಕಲ್ಯಾಣಕ್ಕಾಗಿ ಸಲ್ಲಿಸುವ ನಿಸ್ವಾರ್ಥ ಸೇವೆಯೇ ಧರ್ಮ ಕಾರ್ಯವಾಗಿದೆ ಎಂದು ನುಡಿದರು.
ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಪರೋಪಕಾರಂ ಇದಂ ಶರೀರಂ ಎಂಬಂತೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತದ ಅವಧಿಯಲ್ಲಿ ಪುಣ್ಯದ ಕಾರ್ಯಗಳನ್ನು ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಬೇಕು, ಗುರುವಿನ ಸೇವೆ ಹಾಗೂ ಪುಣ್ಯ ಕಾರ್ಯ ಮಾಡಲು ಏಕಾಗ್ರತೆಗೆ ಸತ್ಸಂಗ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.
ಗುರು ಪಾದವನಿಟ್ಟ ನೆಲ ಪುಣ್ಯ ಕ್ಷೇತ್ರ, ನೀನಿಟ್ಟ ಜಲ ಪಾವನ ತೀರ್ಥ ಎಂಬಂತೆ ಮೌನಯೋಗಿ ಗುರುನಾಥಾರೂಢರ ಅವತಾರಿ ಇಂಚಲದ ಡಾಽ ಶಿವಾನಂದ ಭಾರತಿ ಶ್ರೀಗಳ ಪಾದ ಸ್ಪರ್ಶದಿಂದ ಇಂದು ಈ ಭೂಮಿ ಪುಣ್ಯ ಕ್ಷೇತ್ರವಾಗಿದೆ. ಭಕ್ತನು ದೇವರಿಗೆ ಸಲ್ಲಿಸುವ ಭಕ್ತಿಯಲ್ಲಿ ಯಾವುದೇ ರೀತಿಯ ಸ್ವಾರ್ಥದ ಫಲಾಪೇಕ್ಷೆ ಇರಬಾರದು.ಮೂಢನಂಬಿಕೆ ಬರಬಾರದು. ಭಕ್ತಿ ನಿಧಾನವಾದರೂ ಸಹ ಪ್ರಧಾನವಾಗಿರಬೇಕು. ಅಂತಹ ಭಕ್ತನಿಗೆ ದೇವರು ಒಲಿಯುತ್ತಾನೆ, ಭಕ್ತಿ ಭಾವನೆಗಳಿಗೆ ಮೀಸಲಾಗಿರಬೇಕು. ಕೇಳುವ, ಹಾಡುವ, ಸ್ಮರಣೆ, ಪೂಜೆ ಮತ್ತಿತರ ಭಕ್ತಿಯು ಅವರವರ ಭಾವನೆಗಳಿಗೆ ಅನುಗುಣವಾಗಿ ನಡೆಯುತ್ತದೆ ಎಂದು ಶ್ರೀಗಳು ತಿಳಿಸಿದರು.
ಶ್ರೀಮಠದ ಅಧ್ಯಕ್ಷ ಗಂಗಾಧರ್ಪ ಅಂಗಡಿ, ಮಹಾದೇವಪ್ಪ ಬಣಕಾರ, ಬೀರ್ಪ ಹುಚ್ಚಣ್ಣನವರ, ಗದಿಗಪ್ಪ ಸಾರ್ಥಿ, ಬಸವಣ್ಣೆಪ್ಪ ಬಣಕಾರ, ಹನುಮಂತಪ್ಪ ಸಾರ್ಥಿ, ವೀರ್ಪ ಬಣಕಾರ, ಬಸನಗೌಡ ಮುದಿಗೌಡ್ರ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಇದ್ದರು.