ರಾಣೆಬೆನ್ನೂರ

ನಮ್ಮ ಆರೋಗ್ಯದ ವ್ಯವಸ್ಥೆ ಹದಗೆಡಲು ನಾವೇ ಕಾರಣ: ಸೋಮಪ್ಪ ಬಾಡಿನ

ನಮ್ಮ ಆರೋಗ್ಯದ ವ್ಯವಸ್ಥೆ ಹದಗೆಡಲು ನಾವೇ ಕಾರಣ: ಸೋಮಪ್ಪ ಬಾಡಿನ

ರಾಣೇಬೆನ್ನೂರ 10:  ಸರ್ವರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡಾಗ ಮಾತ್ರ ಆರೋಗ್ಯವಂತ ವಾತಾವರಣವನ್ನು ನಾವು ಕಂಡುಕೊಳ್ಳಬಹುದು. ಸ್ವಚ್ಛತೆ ಇಲ್ಲವಾದರೆ ನಮ್ಮ ಆರೋಗ್ಯದ ವ್ಯವಸ್ಥೆ ಹದಗೆಡಲು ನಾವೇ ಕಾರಣವಾದಂತಾಗುತ್ತದೆ ಎಂದು ಗ್ರಾಮದ ಮುಖಂಡ ಸೋಮಪ್ಪ ಬಾಡಿನ ಹೇಳಿದರು. 

ತಾಲೂಕಿನ ಚಂದಾಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮಗಳ ಅಭಿವೃದ್ಧಿ ಮತ್ತು ಸ್ವಚ್ಛತೆಯ ಬಗ್ಗೆ ಮಹಾತ್ಮ ಗಾಂಧೀಜಿಯವರು ಕನಸು ಕಂಡಿದ್ದರು. ಅವರ ಕನಸನ್ನು ನನಸಾಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಹ ಇಂತಹ ಸ್ವಚ್ಛತಾ ಕಾರ್ಯಕ್ರಮವನ್ನು ಗ್ರಾಮಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ಶ್ಲ್ಯಾಘನೀಯ ಎಂದರು. 

ಸರಕಾರವೂ ಸಹ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನೆಲ್ಲ ಅರಿತುಕೊಂಡು ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಂದಾಗ ಯೋಜನೆಗಳು ಅನುಷ್ಠಾನಕ್ಕೆ ಬಂದದ್ದು ಸಾರ್ಥಕವಾಗುತ್ತದೆ. ಸರಕಾರ ಮಾಡದಂತಹ ಉತ್ತಮ ಕೆಲಸಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು. 

ಗ್ರಾಪಂ ಸದಸ್ಯೆ ಶೈಲಾ ಮೇವುಂಡಿ, ಗ್ರಾಪಂ ಮಾಜಿ ಅಧ್ಯಕ್ಷ ಜಗನ್ನಾಥ ಪಾಟೀಲ, ಗ್ರಾಮದ ಮುಖಂಡರಾದ ಬಸಪ್ಪ ಹೊನ್ನತ್ತಿ, ಪರಮೇಶಪ್ಪ ಮೇಡ್ಲೇರಿ, ಸೋಮಪ್ಪ ಕುದರಿಹಾಳ, ಯೋಜನೆಯ ಮೇಲ್ವಿಚಾರಕ ಡಿ.ಸತೀಶ, ಸೇವಾ ಪ್ರತಿನಿಧಿ ಸರಸ್ವತಿ ದೀಪಾವಳಿ ಸೇರಿದಂತೆ ಧರ್ಮಸ್ಥಳ ಸಂಘದ ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಇದ್ದರು. 


ಸುದ್ದಿ ಓದಿ