ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನ
ಬೈಲಹೊಂಗಲ 18: ಬೆಳಗಾವಿ ಲೋಕಸಭಾ ಉಪಚುನಾಣೆಗೆ ನಡೆದ ಮತದಾನ ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮಂದಗತಿಯಲ್ಲಿ ಜರುಗಿತು.ಮುಂಜಾನೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದ್ದರೂ ಮತದಾರರು ಮಂದಗತಿಯಲ್ಲಿಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಮತ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜರ್, ವಿಕಲಾಂಗರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತಚಲಾಯಿಸಲು ತಿಳಿಸುತ್ತಿದ್ದರು. ಕೆಲ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಮಾಸ್ಕ್ ವಿತರಿಸಿದರು. ತಡವಾದ ಮತದಾನ- ತಾಲೂಕಿನ ಸಂಗೊಳ್ಳಿ ಗ್ರಾಮದ ಮತಗಟ್ಟೆ ನಂ.139 ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ 2 ಗಂಟೆಗಳ ಕಾಲ ಮತದಾನ ವಿಳಂಬವಾಯಿತು. ಬೈಲಹೊಂಗಲದಿಂದ ನುರಿತ ಅಧಿಕಾರಿಗಳು ತೆರಳಿ ರಿಪೇರಿ ಮಾಡಿದ ನಂತರ 9 ಗಂಟೆಗೆ ಮತದಾನ ಪ್ರಾರಂಭವಾಯಿತು. ಬೈಲಹೊಂಗಲ ಮತಗಟ್ಟೆ 66, 70ಗಳಲ್ಲಿ ಹಾಗೂ ದೊಡವಾಡ, ಹಲಕಿ, ವಕ್ಕುಂದ, ಗೋತಮಾರ, ಆನಿಗೋಳ, ಚಚಡಿ, ಮಾಟೋಳ್ಳಿ, ವಕ್ಕುಂದ, ಇಂಚಲ ಗ್ರಾಮಗಳಲ್ಲಿ ಮತ ಯಂತ್ರ ತಾಂತ್ರಿಕ ದೋಷದಿಂದ ಕೆಲ ಕಡೆ ಮತಯಂತ್ರ ರಿಪೇರಿ ಹಾಗೂ ಕೆಲ ಕಡೆ ಮತಯಂತ್ರ ಬದಲಾವಣೆ ಮಾಡಲಾಯಿತು.ಬೈಲಹೊಂಗಲ ಪುರಸಭೆಯ ಆವರಣದ ಮತಗಟ್ಟೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ಮತದಾನ ಮಾಡಿದರು.