ಬೈಲಹೊಂಗಲ

ಅಭಿವೃದ್ಧಿಯ ಹರಿಕಾರ ಸತೀಶ ಜಾರಕಿಹೊಳಿಗೆ ಮತ ನೀಡಿ: ಸಿದ್ದರಾಮಯ್ಯ

ಅಭಿವೃದ್ಧಿಯ ಹರಿಕಾರ ಸತೀಶ ಜಾರಕಿಹೊಳಿಗೆ ಮತ ನೀಡಿ: ಸಿದ್ದರಾಮಯ್ಯ

ಬೈಲಹೊಂಗಲ 11:  ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಕಳಿಸಿಕೊಟ್ಟಿದ್ದೀರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮುಂದೆ ನಿಂತು ಮಾತನಾಡುವ ಧೈರ್ಯವಿಲ್ಲ. ರಾಜ್ಯದಲ್ಲಿ ಎರಡು ಬಾರಿ ಪ್ರವಾಹದಿಂದ ತತ್ತರಿಸಿ ಜನ ಬೀದಿ ಪಾಲಾದರೂ ಪರಿಹಾರ ತರಲಿಲ್ಲ. ಇಂತಹ ಸಂಸದರನ್ನು ಕಳಿಸಿಕೊಟ್ಟ ನೀವು ಈಗ ಪಾಶ್ಚಾತ್ತಾಪ ಪಡುತ್ತಿದ್ದಿರಿ ಇಂತಹದರದಲ್ಲಿ ರಾಜಕೀಯ ಅನುಭವವಿಲ್ಲದ ಅಭಿವೃದ್ಧಿಯ ಅಧ್ಯಯನವಿಲ್ಲದ ಹೆಣ್ಣುಮಗಳನ್ನು ಆಯ್ಕೆ ಮಾಡಿದರೆ ಬೆಳಗಾವಿ ಜಿಲ್ಲೆ ಅಭಿವೃದ್ಧಿಯಾಗಿತೇ? ಎಂದು ಜನರನ್ನು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿಯ ಹರಿಕಾರ ಸತೀಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಆರ್ಶೀವಾದ ಮಾಡಬೇಕೆಂದು ಮತದಾರರಲ್ಲಿ ವಿನಂತಿಸಿಕೊಂಡರು.

  ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರಾರ್ಥ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಪರ  ಇಲ್ಲಿಯ ಪೃಥ್ವಿ ಗಾರ್ಡನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಪ್ರಧಾನಿ ಮೋದಿ ಸುಳ್ಳಿನ ಸರದಾರ ಕಪ್ಪು ಹಣ ಮರಳಿ ದೇಶಕ್ಕೆ ತಂದು ಪ್ರತಿಯೊಬ್ಬರ ಬ್ಯಾಂಕ ಖಾತೆಗೆ 15 ಲಕ್ಷ ರೂ. ಜಮೆ ಮಾಡುತ್ತೇನೆ ಎಂದಿದ್ದರು ನಿಮಗೆ ಜಮೆ ಆಗಿದಾವಾ? ಸ್ವರ್ಗವನ್ನು ಸೃಷ್ಟಿ ಮಾಡುತ್ತೇನೆ ಎಂದ ಪ್ರಧಾನಿ ಮೋದಿ ಪ್ರಧಾನಿಯಾಗಿ ಏಳು ವರ್ಷ ಗತಿಸಿವೇ ದೇಶವನ್ನು ನರಕ ಯಾತ್ರೆಗೆ ಕೊಂಡಯ್ಯುತ್ತಿದ್ದಾರೆ. ಸ್ವರ್ಗ ಎಲ್ಲಿದೇ ನೀವೇ ಹೇಳಿ? ಎಂದು ಪ್ರಶ್ನಿಸಿದ ಅವರು ರಸಗೊಬ್ಬರ, ಪೆಟ್ರೋಲ, ಅಡುಗೆ ಅನಿಲ, ದಿನಸಿ ವಸ್ತು, ಸಿಮೆಂಟ, ಕಬ್ಬಿಣ, ಕಟ್ಟಡ ಸಾಮಾಗ್ರಿ  ಬೆಲೆ ಗಗನಕ್ಕೆ ಏರಿಸಿದ್ದು ಇದು ರೈತ ಮತ್ತು ಜನವಿರೋಧಿ ಸರ್ಕಾರ ಎಂದು ಮೋದಿ ಸರ್ಕಾರವನ್ನು ಟೀಕಿಸಿದರು. 

     2008ರಲ್ಲಿ ಹಿತ್ತಲ ಬಾಗಿಲಿನಿಂದ ಅಧಿಕಾರ ಹಿಡಿದಿದ್ದ ಯಡಿಯೂರಪ್ಪ, 2019 ರಲ್ಲಿ 17 ಶಾಸಕರನ್ನು 600 ಕೋಟಿ ಖರೀದಿಸಿ, ಮರು ಚುನಾವಣೆಗೆ 600 ಕೋಟಿ ಖರ್ಚು ಮಾಡಿ ಅಧಿಕಾರ ಬಂದರಲ್ಲ ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು ಇದು ಸಾರ್ವಜನಿಕರÀ ತೆರಿಗೆ ಹಣವಲ್ಲವೇ ಎಂದು ರೇಗಿದರು. ಬಿಎಸ್‍ವೈ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು ಈ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರನ್ನು ಗೆಲ್ಲಿಸುವುದರ ಮೂಲಕ ಬಿಜೆಪಿ ತಕ್ಕ ಪಾಠ ಕಲಿಸಬೇಕೆಂದು ಮತದಾರರಿಗೆ ಕರೆ ನೀಡಿದರು.ಮುಂದಿನ ಅವಧಿಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಬಂದರೆ 10 ಕೆಜಿ ಉಚಿತ ಅಕ್ಕಿ ಕೊಡಲಾಗುವುದು ಎಂದು ವಾಗ್ದಾನ ಮಾಡಿದರು. ಕಳೆದ 4 ದಿನಗಳಿಂದ ಸಾರಿಗೆ ಮುಷ್ಕರದಿಂದ ಪ್ರಯಾಣಿಕರು ಕಷ್ಟಪಡುವಂತಾಗಿದೆ. ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅವರ ವಿರುದ್ದ ಎಸ್ಮಾ ಜಾರಿ ಮಾಡಿದ್ದು ಯಾವ ನ್ಯಾಯ ಎಂದರು.

 ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಸೋಮಣ್ಣ ಬೇವಿನಮರದ, ಡಾ.ವ್ಹಿ.ಎಸ್.ಸಾಧುನವರ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕೆಂದು ಮತದಾರರಲ್ಲಿ ಮತ ಯಾಚಿಸಿದರು.ಲೋಕಸಭಾ ಅಭ್ಯರ್ಥಿ ಸತೀಶ ಜಾರಕಿಹೊಳಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ದಿ ಮಾಡಿದ್ದೇನೆ. ಬೆಳಗಾವಿ ಕ್ಷೇತ್ರದ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಬದ್ದನಾಗಿದ್ದೇನೆ. ಈ ಬಾರಿ ಮತದಾರರು ನನಗೆ ಆರ್ಶೀವದಿಸಿ ಎಂದು ಮತ ಯಾಚಿಸಿದರು.

 ಮಾಜಿ ಸಂಸದರಾದ ಪ್ರಕಾಶ ಹುಕ್ಕೇರಿ, ಚಂದ್ರಪ್ಪ, ಐವಾನ ಡಿಸೋಜಾ, ಶಾಸಕಿ ಕುಸುಮಾ ಶಿವಳ್ಳಿ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಅನ್ವರ ಮುಧೋಳ, ಡಾ.ಶರಣಪ್ಪ ಕೋಟಗಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಬಸವರಾಜ ಕೌಜಲಗಿ, ವಿನಯ ನಾವಲಗಟ್ಟಿ, ಮಲ್ಲಪ್ಪ ಮುರಗೋಡ, ಮಹಾಂತೇಶ ಮತ್ತಿಕೊಪ್ಪ, ಡಾ.ಮಹಾಂತೇಶ ಕಳ್ಳಿಬಡ್ಡಿ, ಮಹೇಶ ಬೆಲ್ಲದ, ಬಸವರಾಜ ಜನ್ಮಟ್ಟಿ, ಶಂಕರಗೌಡ ಪಾಟೀಲ, ಶಿವರುದ್ರಪ್ಪ ಹಟ್ಟಿಹೊಳಿ, ಕಾರ್ತಿಕ ಪಾಟೀಲ ಉಮೇಶ ಬೋಳೆತ್ತಿನ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು. 


ಸುದ್ದಿ ಓದಿ