ಕಾರವಾರ

ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ : ಪರಿಹಾರ ಕಾರ್ಯಾಚರಣೆಯಲ್ಲಿ ಶಾಸಕಿ ರೂಪಾಲಿ ಎಸ್‌.ನಾಯ್ಕ

ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ : ಪರಿಹಾರ ಕಾರ್ಯಾಚರಣೆಯಲ್ಲಿ  ಶಾಸಕಿ  ರೂಪಾಲಿ ಎಸ್‌.ನಾಯ್ಕ

ಕಾರವಾರ : ಕಾರವಾರ ತಾಲ್ಲೂಕಿನಲ್ಲಿ  ಪ್ರವಾಹದಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಶಾಸಕಿ ರೂಪಾಲಿ ಎಸ್‌.ನಾಯ್ಕ ಭೇಟಿ ನೀಡಿ, ಅಪಾಯದಲ್ಲಿ ಸಿಲುಕಿದ ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. 

ಕದ್ರಾ ಸೇರಿದಂತೆ ವಿವಿಧ  ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂತ್ರಸ್ತರಿಗೆ ಯಾವುದೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು. ಕದ್ರಾ ಜಲಾಶಯಕ್ಕೆ ಭೇಟಿ ನೀಡಿ ಕೆಪಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಜನರಿಗೆ ಸಮಸ್ಯೆಯಾಗದಂತೆ ನೀರನ್ನು ಜಲಾಶಯದಿಂದ ಹೊರಬಿಡಲು ವಿನಂತಿಸಿದರು. ಜಲಾಶಯದಿಂದ ಒಂದೇ ಸಮನೆ ಹೊರಗೆ ನೀರು ಬಿಡಬಾರದು. ಕದ್ರಾ, ಮಲ್ಲಾಪುರದಲ್ಲಿ ಈಗಾಗಲೇ  ಪ್ರವಾಹ ಎದುರಾಗಿದ್ದು, ಗೋಟೆಗಾಳಿ, ಘಾಡಸಾಯಿ, ಭೈರೆ, ಉಳಗಾ ಸೇರಿದಂತೆ ವಿವಿಧ ಗ್ರಾಮಗಳು ಸಂಪೂರ್ಣ ಜಲಾವೃತವಾಗುತ್ತದೆ. ಅದನ್ನು ತಪ್ಪಿಸುವುದಕ್ಕೆ ನಿಧಾನವಾಗಿ ಅಲ್ಪ ಪ್ರಮಾಣದಲ್ಲಿ ನೀರನ್ನು ಹೊರ ಬಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿ, ಕದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹಾಗೂ ಹೊರ ಹರಿವಿನ ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು. ಅಧಿಕಾರಿಗಳು ಮಳೆಯ ಪ್ರಮಾಣ ಹಾಗೂ ನೀರು ಹೊರಬಿಡದಿದ್ದರೆ ಆಗುವ ಅನಾಹುತವನ್ನು ಶಾಸಕಿಗೆ ತಿಳಿಸಿ ಹೇಳಿದರು.  

ಮನೆಯಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ: 

ಕದ್ರಾ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ತಗ್ಗು ಪ್ರದೇಶದಲ್ಲಿರುವ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಅಗತ್ಯತೆ ಬಗ್ಗೆ  ಶಾಸಕಿ ಗ್ರಾಮದ  ಜನತೆಗೆ ಮನವರಿಕೆ ಮಾಡಿಕೊಟ್ಟರು. 

ಭೈರೆ ಗ್ರಾಮವು ಸಂಪರ್ಕ ಕಡಿತಗೊಂಡು ನಡುಗಡ್ಡೆಯಾದಂತಾಗಿದ್ದು, ಸಿಲುಕೊಂಡವರ ರಕ್ಷಣೆಗೆ ದೋಣಿಗಳ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಿಸಿದರು. ಇಲ್ಲಿನ ಜನತೆಯ ರಕ್ಷಣೆ ಜವಾಬ್ದಾರಿಯನ್ನು ವಲಯ ಅರಣ್ಯಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು. ಅಂಕೋಲಾ ತಾಲ್ಲೂಕಿನ ಅಗಸೂರಿನ ಹೊನ್ನಳ್ಳಿ ಗ್ರಾಮವು ಸಂಪೂರ್ಣ ಜಲಾವೃತ್ತವಾಗಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿರುವುದನ್ನು ಪರೀಶೀಲಿಸಿದರು.  

ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆಗೆ ಸೂಚನೆ:  

ಎಲ್ಲೆಡೆ ಪ್ರವಾಹ ಸ್ಥಿತಿ ಇರುವುದರಿಂದ ಬಹಳಷ್ಟು ಗ್ರಾಮಗಳು ಜಲಾವೃತವಾಗಿವೆ. ಕಾಳಜಿ ಕೇಂದ್ರಗಳನ್ನು ತೆರೆಯಲಾಗಿವೆ. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಪೌಷ್ಟಿಕ ಆಹಾರ, ಮೊಟ್ಟೆ, ಮಕ್ಕಳಿಗೆ ಹಾಲು ಕುಡಿಯಲು ನೀರು, ವಿದ್ಯುತ್ ವ್ಯವಸ್ಥೆ, ಹಾಸಿಗೆಗಳ ವ್ಯವಸ್ಥೆ ಮಾಡಬೇಕು. ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನೆರೆ ಸಂತ್ರಸ್ತರನ್ನು ಭೇಟಿಯಾಗಿ ಅವರಿಗೆ ಧೈರ್ಯ ಹೇಳಿದ ಶಾಸಕರು, ಕಾಳಜಿ ಕೇಂದ್ರಗಳಲ್ಲಿ ಸಮರ​‍್ಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಮನೆ ಕಳೆದುಕೊಂಡವರು ದೃತಿಗೆಡುವ ಅಗತ್ಯ ಇಲ್ಲ. ಮನೆ ನಿರ್ಮಾಣಕ್ಕೆ ಸೂಕ್ತ ಪರಿಹಾರ, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.    



ಸುದ್ದಿ ಓದಿ