ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ: ಗ್ರಾಮಸ್ಥರ ಆರೋಪ
ಬ್ಯಾಡಗಿ: ಜಿಲ್ಲಾ ಪಂಚಾಯತಿ ಅನುದಾನದಲ್ಲಿ ನಿರ್ಮಾಣವಾದ ಅಣೂರ ಗ್ರಾಮದಿಂದ ಬನ್ನಿಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಕೆಲಕಾಲ ಅಣೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಬ್ಯಾಡಗಿ ತಾಲೂಕು ಅಣೂರು ಗ್ರಾಮದಲ್ಲಿ ಜರುಗಿದೆ.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ಸುಮಾರು 80.ಲಕ್ಷ ರೂಗಳ ವೆಚ್ಚದಲ್ಲಿ ಏಳೆಂಟು ತಿಂಗಳ ಹಿಂದೆ ನಿರ್ಮಾಣವಾದ ಡಾಂಬರ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಧಿಕಾರಿಗಳು ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕೆಂದು ಆರೋಪಿಸಿದರು.
ರೈತ ಮುಖಂಡ ಬಸವರಾಜ ಬಡ್ಡಿಯವರ ಮಾತನಾಡಿ, ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಳಪೆ ಗುಣಮಟ್ಟದಿಂದ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆಯಲಾಗಿತ್ತು, ಹೀಗಿದ್ದರೂ ಕೂಡ ಸಂಪೂರ್ಣ ರಸ್ತೆಯನ್ನು ಕಳೆಪೆ ಗುಣಮಟ್ಟದಿಂದ ನಿರ್ಮಾಣ ಮಾಡಲಾಗಿದೆ. ಅಣೂರ ಗ್ರಾಮದ ಕೊಲ್ಲಾಪುರ ಕ್ರಾಸ್ನಿಂದ ಬನ್ನಿಹಟ್ಟಿ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ರಸ್ತೆ ಇದಾಗಿದ್ದು, ಈ ಮಾರ್ಗದಲ್ಲಿ ರೈತರು ಜಮೀನುಗಳಿಗೆ ಬಂದು ಹೋಗುವ ಪ್ರಮುಖ ರಸ್ತೆ ಇದಾಗಿದೆ. ಈಗಾಗಲೇ ಅರ್ಧವರ್ಷದಲ್ಲಿ ತಗ್ಗುಗುಂಡಿಗಳು ಬಿದ್ದಿದ್ದು, ಮುಂದಿನ ದಿನಗಳಲ್ಲಿ ಎತ್ತಿನ ಬಂಡಿಗಳನ್ನು ಸಾಗಿಸಲು ಕಷ್ಟಕರವಾಗುತ್ತದೆ ಸುಮಾರು ಎರಡು ಕೀ.ಮಿ ರಸ್ತೆ ನಿರ್ಮಾಣ ಮಾಡಲಾಗಿದೆ ಕೂಡಲೇ ರಸ್ತೆಯನ್ನು ಮರುನಿರ್ಮಾಣ ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕುಮಾರ ಬಡ್ಡಿಯವರ, ಮಂಜು ಬಡ್ಡಿಯವರ, ಫಕ್ಕಿರೇಶ ಬಂಗೇರ, ಬಸವರಾಜ ಬಡ್ಡಿಯವರ, ಪ್ರವೀಣ ಹೊಸಗೌಡ್ರ, ವಿರೇಶ ಸುಡಂಬಿ, ಸಂತೋಷ ಬಡ್ಡಿಯವರ, ಮಲ್ಲಪ್ಪ ಕೊಪ್ಪದ ಇನ್ನಿತರರು ಇದ್ದರು.