ಕೊಪ್ಪಳ

ಮನುಷ್ಯನ ಸಂಸ್ಕಾರವೇ ಬದುಕಿಗೆ ದಾರೀದೀಪ: ಡಾ. ಮಹಾದೇವ ಸ್ವಾಮೀಜಿ

ಮನುಷ್ಯನ ಸಂಸ್ಕಾರವೇ ಬದುಕಿಗೆ ದಾರೀದೀಪ: ಡಾ. ಮಹಾದೇವ ಸ್ವಾಮೀಜಿ


ಕುಕನೂರು, ಅ. 17: ಮನುಷ್ಯನು ಜೀವನದಲ್ಲಿ ಉತ್ತಮ ಚಿಂತನೆ, ಸನ್ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ನಿಜವಾದ ಅರ್ಥ ಬರುತ್ತದೆ ಎಂದು ಕುಕನೂರಿನ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮಹಾದೇವ ಮಹಾಸ್ವಾಮಿಗಳು ಹೇಳಿದರು.


ಅವರು ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದ ಹಿರಿಯಮ್ಮ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ದೇವಿ ಪುರಾಣ ಕಾರ್ಯಕ್ರಮದ ಅಂಗವಾಗಿ ಆಶೀರ್ವಚನ ನೀಡಿ ಮಾತನಾಡಿದರು.ಮನುಷ್ಯನ ಆಲೋಚನೆಗಳು ಆತನ ನಡೆ-ನುಡಿಗಳನ್ನು ರೂಪಿಸುತ್ತವೆ. ನಡೆ-ನುಡಿಗಳು ವ್ಯಕ್ತಿತ್ವವನ್ನು ಬೆಳೆಸುತ್ತವೆ.


ಆದ್ದರಿಂದ ಪ್ರತಿಯೊಬ್ಬರೂ ಸಕಾರಾತ್ಮಕ ಚಿಂತನೆಗಳೊಂದಿಗೆ ಬದುಕಿ, ಕುಟುಂಬ ಹಾಗೂ ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಬೇಕು. ಉತ್ತಮ ಸಂಸ್ಕಾರ, ಸನ್ನಡತೆ ಮತ್ತು ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ದೇವಿ ಪುರಾಣಗಳು ಮನುಷ್ಯನಿಗೆ ಭಕ್ತಿ, ಧರ್ಮ, ನೀತಿ ಮತ್ತು ಸಂಸ್ಕಾರಗಳ ಮಹತ್ವವನ್ನು ತಿಳಿಸಿಕೊಡುತ್ತವೆ.


ಪುರಾಣ ಪ್ರವಚನಗಳ ಮೂಲಕ ಜೀವನದ ಸತ್ಯಗಳನ್ನು ಅರಿತುಕೊಂಡು, ಅವುಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಕ್ತಿಭಾವವನ್ನು ಬೆಳೆಸುವುದರ ಜೊತೆಗೆ ಜನರಲ್ಲಿ ನೈತಿಕ ಪ್ರಜ್ಞೆ, ಸೌಹಾರ್ದ ಮತ್ತು ಉತ್ತಮ ಸಂಸ್ಕಾರಗಳನ್ನು ಮೂಡಿಸುತ್ತವೆ ಎಂದು ಪೂಜ್ಯರು ಹೇಳಿದರು.


ಚನ್ನಯ್ಯ ಹಿರೇಮಠ ಅವರು ಅತಿಥಿಗಳಾಗಿ ಮಾತನಾಡಿ, ದೇವಿ ಪುರಾಣವು ನಮ್ಮ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ಮಾಧ್ಯಮವಾಗಿದೆ. ಪುರಾಣಗಳಲ್ಲಿ ಅಡಕವಾಗಿರುವ ಧರ್ಮ, ನೀತಿ ಹಾಗೂ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮೀಣ ಜನರಲ್ಲಿ ಭಕ್ತಿ ಮತ್ತು ಸಂಸ್ಕಾರಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬಸವರಾಜ ಜರಗುಂಟಿ, ಮಹಮ್ಮದ್ ಸಾಬ್ ವಾಲಿಕಾರ್, ದೇವಪ್ಪ ಉಗ್ಗನನವರ, ದೇವಪ್ಪ ಮುತ್ತಾಳ, ಪುರಾಣಿಕರಾದ ಶಿವಯೋಗಿ ಹಿರೇಮಠ, ಬಸಂತಪ್ಪ ಅಬ್ಬಿಗೇರಿ, ಮಾರುತಿ ಬಿನ್ನಾಳ, ಅಲ್ಲಾಬಕ್ಷಿ ಭೀಮನೂರ, ರಾಮಚಂದ್ರ​‍್ಪ ಉಪ್ಪಾರ ಸೇರಿದಂತೆ ಗ್ರಾಮದ ಅನೇಕ ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ