ಶಿಗ್ಗಾವ್

ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗ್ರಾಮಸ್ಥರಿಂದ ಸನ್ಮಾನ

ಸೇವೆ ಸಲ್ಲಿಸಿದ ಶಿಕ್ಷಕರಿಗೆ  ಗ್ರಾಮಸ್ಥರಿಂದ ಸನ್ಮಾನ

ಶಿಗ್ಗಾವಿ 03: ಶಾಲೆಯೊಂದರಲ್ಲೇ ಸತತ 25 ವರ್ಷಗಳಕಾಲ ಸೇವೆ ಸಲ್ಲಿಸಿ ಅಪಾರ ಶಿಷ್ಯವೃಂದದಿಂದ ಸನ್ಮಾನ ಸ್ವೀಕರಿಸಿದ ಅಪರೂಪದಲ್ಲಿ ಅಪರೂಪದ ಶಿಕ್ಷಕ ಆರ್‌.ಆರ್‌.ಬಾರಕೇರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು. 

ತಾಲೂಕಿನ ತಿಮ್ಮಾಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಾಂಧಿ ಜಯಂತಿ ಮತ್ತು ಲಾಲಬಹುದ್ದೂರ ಶಾಸ್ತ್ರೀಜಿಯವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಶಿಕ್ಷಕ ಗ್ರಾಮಸ್ಥರೆಲ್ಲರ ಪ್ರೀತಿ ಸಂಪಾದಿಸಬೇಕಾದರೆ ಆ ಗ್ರಾಮದ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ನಿರ್ಮಾತೃವಾಗಿರಬೇಕಾಗಿರುತ್ತದೆ. 25ವರ್ಷ ಈ ಶಾಲೆಗೆ ಸೇವೆ ಸಲ್ಲಿಸಿರುವ ಆರ್‌.ಆರ್‌.ಬಾರಕೇರ ಶಿಕ್ಷಕರನ್ನು ಸೇರಿದಂತೆ ಈ ಹಿಂದಿನ ಶಿಕ್ಷಕರಿಗೆ ಸನ್ಮಾನ ಮಾಡುತ್ತಿರುವ ವಿಷಯ ತಿಳಿದು ಇಷ್ಟೊಂದು ಪ್ರಮಾಣದ ಹಳೆಯ ವಿದ್ಯಾರ್ಥಿಗಳು ಸೇರಿರುವುದು ಅವರ ಸೇವೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಉತ್ತಮ ಶಿಕ್ಷಣದಿಂದಲೆ ಗ್ರಾಮದ ಪ್ರಗತಿ ಸಾಧ್ಯ ಎಂದು ಹೇಳಿದರು. 

ಆರ್‌.ಆರ್‌. ಬಾರಕೇರ ತಮ್ಮ ಹಳೆಯ ವಿದ್ಯಾರ್ಥಿಗಳ ಪ್ರೀತಿಯ ಕಾಣಿಕೆ ಸ್ವೀಕರಿಸಿ, ಬಾವುಕರಾಗಿ ಮಾತನಾಡಿದ ಅವರು ಈ ಗ್ರಾಮದ ಪ್ರತಿಯೊಬ್ಬರೂ ನನ್ನನ್ನು ಇಷ್ಟೊಂದು ಪ್ರೀತಿ ಕೊಟ್ಟು ಕಾಪಾಡುತ್ತಿರುವುದರಿಂದ ನನ್ನ 25 ವರ್ಷದ ಸೇವೆ ಒಂದು ಗಳಿಗೆಯಂತೆ ಕಳೆದು ಹೋಗಿದೆ ಗ್ರಾಮಸ್ಥರು ಮತ್ತು ಶಿಷ್ಯರ ಪ್ರೀತಿಗೆ ಸದಾ ಚಿರಋಣಿಯಾಗಿ ಇರುವುದಾಗಿ ತಿಳಿಸಿದರು. 

ತಾಲೂಕಿನ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸುಮಾ ನವಾತಿ ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಎಸ್‌.ಬಿ ಕಾಳೆ, ಎಸ್‌.ಜಿ.ಕರ್ಜಗಿ, ಎಸ್‌.ಆರ್‌.ಹನುಮಗಟ್ಟಿ, ಎಸ್‌.ಬಿ.ನಧಾಪ್ ಶಿಕ್ಷಕರಿಗೆ ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌.ಡಿ.ಎಂ.ಸಿ ಅಧ್ಯಕ್ಷ ಶಶಿಕುಮಾರ ಹುಲಸೋಗಿ, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಗ್ರಾಪಂ ಅಧ್ಯಕ್ಷ ಬಸವರಾಜ ಕುಂಕೂರ ಸೇರಿದಂತೆ ಗ್ರಾ.ಪಂ ಸದಸ್ಯರು, ಎಸ್‌.ಡಿ.ಎಂ.ಸಿ ಸದಸ್ಯರು, ಗಣ್ಯರು ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ