ವಿಜಯನಗರ: ವಿಶೇಷ ಸಾಮಾನ್ಯ ಸಭೆ ಸೆ.01ಕ್ಕೆ ಮುಂದೂಡಿಕೆ
ಹೊಸಪೇಟೆ(ವಿಜಯನಗರ) 25: ಹೊಸಪೇಟೆಯ ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಗುರುವಾರದಂದು ವಿಶೇಷ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಉಳಿದ ವಿವಿಧ ಕಾಮಗಾರಿಗಳು ಬಾಕಿ ಇರುವುದರಿಂದ ಸೆ. 01ಕ್ಕೆ ಮುಂದೂಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಸಭೆ ಉಪಾಧ್ಯಕ್ಷ ಎಲ್.ಆನಂದ ಅವರು ಅತ್ಯಾವಶಕ ಕಾಮಗಾರಿಗಳಾದ ಖಾಯಂ ಹಾಗೂ ನೇರ ಪಾವತಿಯಡಿಯಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಸುವುದು, ನಗರಸಭೆ ನಿಧಿಯಲ್ಲಿ ಬೀದಿ ನಾಯಿಗಳಿಗೆ ಎ.ಬಿ.ಸಿ. ಆ್ಯಕ್ಟ್ಯಡಿಯಲ್ಲಿ ಸಂತಾನ ಹರಣ ಚಿಕಿತ್ಸೆ ಮಾಡಿಸುವುದು ಹಾಗೂ 2022-23ನೇ ಸಾಲಿನ ಎಸ್.ಎಫ್.ಸಿ. 24.10ರ ಪರಿಷ್ಕೃತ ಕ್ರಿಯಾ ಯೋಜನೆಯನ್ನು ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಸಲ್ಲಿಸುವ 03 ಕಾಮಗಾರಿಗಳನ್ನು ಮಾತ್ರ ಸದಸ್ಯರ ಒಪ್ಪಿಗೆ ಮೇರೆಗೆ ಅನುಮೋದಿಸಿದರು ಮತ್ತು ಇನ್ನೂ ಬಾಕಿ ಇರುವ ವಿವಿಧ ಕಾಮಗಾರಿಗಳನ್ನು ಸೆ.01ರೊಳಗಾಗಿ ಸಿದ್ದಪಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಹೊಸಪೇಟೆಯ ನಗರಸಭೆ ಪೌರಾಯುಕ್ತರಾದ ಮನೋಹರ್ ನಾಗರಾಜ ಅವರು ಅನುಮೋದನೆಗೊಂಡ ಕಾಮಗಾರಿಗಳ ಕುರಿತು ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ, ನಗರಸಭೆ ಸದಸ್ಯರು ಮತ್ತು ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.