ಸಂಗೊಳ್ಳಿ ರಾಯಣ್ಣ 228ನೇ ಜಯಂತಿ, ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ವಿಜಯಗೌಡ ಪಾಟೀಲರಿಗೆ ಆಹ್ವಾನ
ಲೋಕದರ್ಶನ ವರದಿ
ವಿಜಯಪುರ, ಆ. 6: ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅವರ 228ನೇ ಜಯಂತಿ ಹಾಗೂ 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಗಸ್ಟ್ 15ರಂದು ನಡೆಯಲಿರುವ ಬೃಹತ್ ಸಮಾರಂಭಕ್ಕೆ ಬಿಜೆಪಿ ಮುಖಂಡ ವಿಜಯಗೌಡ ಎಸ್. ಪಾಟೀಲ ಅವರಿಗೆ ಆಹ್ವಾನ ಪತ್ರಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ನಗರದ ಬಬಲೇಶ್ವರ ಮತಕ್ಷೇತ್ರದಲ್ಲಿರುವ ವಿಜಯಗೌಡ ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿದ ಆಯೋಜನಾ ಸಮಿತಿ ಪದಾಧಿಕಾರಿಗಳು, ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ ಸಮಾರಂಭದಲ್ಲಿ ಭಾಗವಹಿಸುವಂತೆ ಕೋರಿದರು. ಆಗಸ್ಟ್ 15ರಂದು ಮಧ್ಯಾಹ್ನ 3 ಗಂಟೆಗೆ ಬುರಣಾಪುರದ ಕನಕದಾಸ ನಗರದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೇ್ರಮ ಹಾಗೂ ಕ್ರಾಂತೀವೀರರ ತ್ಯಾಗ-ಬಲಿದಾನದ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು, ನೃತ್ಯ ಪ್ರದರ್ಶನಗಳು ಹಾಗೂ ಸಂಗೊಳ್ಳಿ ರಾಯಣ್ಣ ಅವರ ವೀರಗಾಥೆಯನ್ನು ಆಧರಿಸಿದ ನಾಟಕ ಪ್ರದರ್ಶನವೂ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಪ್ರೋತ್ಸಾಹಧನ ಹಾಗೂ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು ಎಂದು ಆಯೋಜನಾ ಸಮಿತಿ ತಿಳಿಸಿದೆ.
ಸಮಿತಿ ಮುಖಂಡ ಗೌಡಪ್ಪ ಬಡಿಗೇರ ಮಾತನಾಡಿ, ಮಕ್ಕಳಲ್ಲಿ ಸಾಂಸ್ಕೃತಿಕ ಆಸಕ್ತಿ, ನಾಯಕತ್ವದ ಗುಣಗಳು ಹಾಗೂ ದೇಶಭಕ್ತಿಯ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸುಭಾಷ್ ಪಾಂಡ್ರೆ, ಸದು ಮಾನೆ, ಭೀರ್ಪ ಡಾಳೆ, ಅರ್ಜುನ್ ತಡವಲಗ, ಕಾಂತು ಕರಪೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.