ತಾಳಿಕೋಟಿ

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕಾರ್ಯ ಬೇಡ

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕಾರ್ಯ ಬೇಡ

ತಾಳಿಕೋಟೆ 06:  ವೀರಶೈವ ಲಿಂಗಾಯತ ಸಮುದಾಯವನ್ನು ಉಪ ಜಾತಿಗಳ ಆಧಾರದ ಮೇಲೆ ಒಡೆಯುವ ಕಾರ್ಯವನ್ನು ಮಾಡಲಾಗುತ್ತಿದ್ದು, ವೀರಶೈವ ಸಮುದಾಯ ಒಗ್ಗಟ್ಟಾಗಿದ್ದಾಗ ಮಾತ್ರ ಬಲ ತಂದುಕೊಡಲಿದೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು. 

ಅವರು ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಯುಗಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಸಮುದಾಯಗಳು ಸರಕಾರದ ಸೌಲಭ್ಯ ಕೇಳುವದು ತಪ್ಪಲ್ಲ. ಆದರೆ ಕೇಳುವ ಭರದಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಮರೆಯಬಾರದು. ವೀರಶೈವ ಸಮಾಜದ ಎಲ್ಲ ಉಪ ಪಂಗಡಗಳನ್ನು ಒಡೆಯುತ್ತಿರುವದರಿಂದ ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟು ಅಸಾಧ್ಯವಾಗಲಿದೆ. ವೀರಶೈವ ಲಿಂಗಾಯತ ಸಮಾಜ ಒಗ್ಗಾಟ್ಟಾಗಿದ್ದಾಗ ಮಾತ್ರ ನಮಗೆ ಒಂದು ಬೆಲೆ ಬರಲು ಸಾಧ್ಯ. ಭಾರತಿಯ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಗಳ ಪ್ರಚಾರದ ಜೊತೆಗೆ ಭಾರತಿಯ ಸಂಸ್ಕೃತಿಯ ಉಳಿವಿಗೆ ಜಂಗಮ ಸಮಾಜದಲ್ಲಿ ಪಾತ್ರ ದೊಡ್ಡದಾಗಿದೆ. ವೀರಶೈವ ಲಿಂಗಾಯತ ಸಂಪ್ರದಾಯದಲ್ಲಿಯೇ ಅಂತ್ಯಂತ ಶ್ರೇಷ್ಠ ಪಂಕ್ತಿಯನ್ನು ಹಾಕಿಕೊಟ್ಟಿದ್ದು ಜಂಗಮ ಸಮಾಜವಾಗಿದೆ ಎಂದರು. 

ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಮಾತನಾಡಿ, ಸಂಸ್ಕೃತಿ, ಧರ್ಮ ಪರಂಪರೆಯನ್ನು ಪ್ರಚಾರ ಮಾಡಲು ಪಂಚಪೀಠಗಳ ಸ್ಥಾಪನೆಯಾಗಿವೆ. ಆಧುನಿಕ ಕಾಲದಲ್ಲಿ ಭಕ್ತಿ, ಭಾವ ಕಡಿಕೆಯಾಗುತ್ತಿದೆ. ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರದವರೆ ಸ್ವಾಮೀಜಿಗಳು. ಮಠಗಳಿಂದಲೇ ಕೋಟ್ಯಾಂತರ ಜನ ವಿದ್ಯಾವಂತರಾಗಿದ್ದಾರೆ.  ಬ್ರೀಟಿಷರ್ ಕಾಲದಿಂದಲೂ ಸಹ ಜಂಗಮ ಸಮಾಜಕ್ಕೆ  ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಬೇಡಿಕೆ ಇದೆ. ಸರಕಾರ ಎಸ್‌ಟಿ ಪ್ರಮಾಣ ಪತ್ರವನ್ನು ನೀಡಬೇಕು ಎಂದರು. 

ಚಬನೂರಿನ ಜೋತಿಷ್ಯ ರತ್ನ ರಾಮಲಿಂಗಯ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಸಮುದಾಯದಲ್ಲಿಯೇ ಅತ್ಯಂತ ಶ್ರೇಷ್ಟ ಸಮಾಜ ಜಂಗಮ ಸಮಾಜವಾಗಿದೆ. ರೇಣುಕಾಚಾರ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದು ಸರಕಾರ ನಮಗೆ ಕೂಡಲೇ ಎಸ್‌ಟಿ ಪ್ರಮಾಣ ಪತ್ರಗಳನ್ನು ನೀಡುವಂತೆ ಆದೇಶ ಹೊರಡಿಸಬೇಕು ಎಂದರು. 

ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಕುಂಟೋಜಿಯ ಡಾ.ಚನ್ನವೀರ ದೇವರು, ಕೊಡೆಕಲ್ಲದ ಶಿವಕುಮಾರ ಶ್ರೀಗಳು ಮಾತನಾಡಿದರು. 

ಸಾನಿಧ್ಯವನ್ನು ಸಾಸನೂರ ತುಂಬಗಿಯ ಮಹಾಂತಲಿಂಗ ಶಿವಾಚಾರ್ಯರು, ಕಲಕೇರಿಯ ಸಿದ್ದರಾಮೇಶ್ವರ ಶಿವಾಚಾರ್ಯರು, ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಗಳು, ವಡವಡಗಿಯ ವೀರಸಿದ್ದ ಸ್ವಾಮೀಜಿ, ದೇವರಹಿಪ್ಪರಗಿಯ ಜಡಿಸಿದ್ದೇಶ್ವರ ಶಿವಾಚಾರ್ಯ, ಇಟಗಿಯ ಗುರುಶಾಂತ ಶಿವಾಚಾರ್ಯರು, ನಾವದಗಿಯ ರಾಜೇಂದ್ರ ಒಡೆಯರ, ಗುಳಬಾಳದ ಮರಿಹುಚ್ಚೇಶ್ವರ ಸ್ವಾಮೀಜಿ, ಯಾಳವಾರದ ಕೇದಾರಲಿಂಗ ದೇವರು, ಭಂಟನೂರದ ಸರೋಜಮ್ಮನವರು, ಕೊಕಟನೂರದ  ಮಡಿವಾಳೇಶ್ವರ  ಸ್ವಾಮೀಗಳು, ಜಂಬಲದಿನ್ನಿಯ ಸಿದ್ದರಾಮ ದೇವರು, ಹೃದಯ ರೋಗ ತಜ್ಞ ಡಾ.ಶಂಕರಗೌಡ ಪಾಟೀಲ, ಅಸ್ಕಿ ಪೌಂಡೇಶನ್‌ದ ಅಧ್ಯಕ್ಷ ಸಿ.ಬಿ.ಅಸ್ಕಿ, ರಾಜಶೇಖರ ಹಿರೇಮಠ, ವ್ಹಿ.ಸಿ.ಹಿರೇಮಠ, ರಾಜ್ಯ ಸಂಚಾಲಕಿ ಎಂ.ಪಿ.ಸುಜಾತಾ ಸೇರಿದಂತೆ ಜಂಗಮ ಸಮಾಜದ ಗಣ್ಯರು, ಮುಖಂಡರು ಇದ್ದರು. ಕಾರ್ಯಕ್ರಮಕ್ಕು ಮುನ್ನ ರೇಣುಕಾಚಾರ್ಯರ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ 111 ಮಹಿಳೆಯರು ಪೂರ್ಣಕುಂಬವನ್ನು ಹೊತ್ತು ಸಾಗಿದರು. 

ಸೋಮಶೇಖರ ಹಿರೇಮಠ ಪ್ರಾರ್ಥಿಸಿದರು. ಶಿವಶಂಕರ ಹಿರೇಮಠ ಸ್ವಾಗತಿಸಿದರು. ಆರ್‌.ಬಿ.ದಮ್ಮೂರಮಠ, ರಾಜು ಹಿರೇಮಠ ನಿರೂಪಿಸಿದರು. ಓಂಪ್ರಕಾಶ ಡೋಣೂರಮಠ ವಂದಿಸಿದರು. 


ಸುದ್ದಿ ಓದಿ