ಫೆ.15 ಮತ್ತು ಫೆ.16ರಂದು ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನ
ಲೋಕದರ್ಶನ ವರದಿ
ಸವದತ್ತಿ 14: ವೀರರಾಣಿ ಕಿತ್ತೂರು ಚೆನ್ನಮ್ಮಳ ಚರಿತ್ರೆಯನ್ನು ಆಧಾರಿತವಾಗಿಟ್ಟುಕೊಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳಿತ್ತಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕದ 12ನೇ ಪ್ರದರ್ಶನವು ಸವದತ್ತಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಫೆ.15 ಮತ್ತು ಫೆ.16ರಂದು ಸಂಜೆ 6 ಗಂಟೆಗೆ ಎರಡು ದಿನಗಳ ಕಾಲ ಜರುಗಲಿದೆ.
ಸವದತ್ತಿಯ ಮಾಜಿ ಶಾಸಕರಾದ ಲಿಂ.ರಾಜಣ್ಣ ಮಾಮನಿಯವರ 63ನೇ ಜನ್ಮದಿನೋತ್ಸವದ ಅಂಗವಾಗಿ ಬಿಜೆಪಿ ಮುಖಂಡರಾದ ವಿರುಪಾಕ್ಷಣ್ಣ ಕರಬಸಪ್ಪ ಮಾಮನಿಯವರ ನೇತೃತ್ವದಲ್ಲಿ ರಂಗಾಯಣ ಧಾರವಾಡ ಇವರಿಂದ ಬೃಹತ್ ನಾಟಕ ಪ್ರದರ್ಶನಗೊಳ್ಳಲಿದೆ.
ಕರ್ನಾಟಕದ ಇತಿಹಾಸದಲ್ಲಿಯೇ ್ರ್ರಥಮ ಬಾರಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ್ತಿ ವೀರರಾಣಿ ಚೆನ್ನಮ್ಮಳ ಚರಿತ್ರೆ ಸಾರುವ ರಂಗ ಪ್ರಯೋಗ ಇದಾಗಿದೆ. ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ನಿರ್ದೇಶನದಲ್ಲಿ ನಡೆಯುತ್ತಿರುವ ಈ ನಾಟಕ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ. ವಿಭಿನ್ನ ತಂತ್ರಜ್ಞಾನ ಬಳಸಿರುವ ಈ ರಂಗ ಪ್ರಯೋಗದಲ್ಲಿ ಜೀವಂತ ಆನೆ, ಕುದುರೆ, ಒಂಟೆಗಳು ರಂಗದ ಮೇಲೆ ಪ್ರವೇಶ ಮಾಡಲಿವೆ.
ತಾಲೂಕು ಕ್ರೀಡಾಂಗಣದಲ್ಲಿ ಈಗಾಗಲೆ ನಾಟಕ ಪ್ರದರ್ಶನಕ್ಕೆ ರಂಗ ವೇದಿಕೆ ಸಜ್ಜಾಗುತ್ತಿದ್ದು, ಲಕ್ಕುಂಡಿ ಉತ್ಸವದಲ್ಲಿ 11ನೇ ಪ್ರಯೋಗವನ್ನು ಮುಗಿಸಿಕೊಂಡು ಸವದತ್ತಿಗೆ ತಂಡ ಆಗಮಿಸಿದೆ. ರಂಗ ಕಲಾವಿದರ ತಂಡದೊಂದಿಗೆ ಕ್ರೀಡಾಂಗಣಕ್ಕೆ ಆನೆ, ಕುದುರೆ, ಒಂಟೆಗಳು ಸಹ ಆಗಮಿಸಿವೆ. ಕಿತ್ತೂರು ಕೋಟೆಯ ಮಾದರಿಯಲ್ಲಿಯೇ ವೇದಿಕೆಯನ್ನು ಸಿದ್ದಪಡಿಸಲಾಗುತ್ತಿದ್ದು, ಎಲ್ಲ ಸಿದ್ದತೆಗಳು ಭರದಿಂದ ಸಾಗಿವೆ. ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನದ ಪ್ರಚಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತಿರುವದರಿಂದ ನಾಟಕ ವೀಕ್ಷಣೆಗೆ ತಾಲೂಕಿನ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆಗಳಿವೆ.
-------
ಐತಿಹಾಸಿಕ ಕ್ಷೇತ್ರವಾಗಿರುವ ಸವದತ್ತಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನಕ್ಕೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ ಕುರಿತು ಮಾಡಿರುವಂತ ಝಾನತಾ ರಾಜಾ ನಾಟಕದ ಮಾದರಿಯಲ್ಲಿಯೇ ವೀರರಾಣಿ ಕಿತ್ತೂರು ಚೆನ್ನಮ್ಮಾ ನಾಟಕದಲ್ಲಿ ನೈಜವಾದಂತ ಶೌರ್ಯ ಪ್ರದರ್ಶನದ ದೃಶ್ಯಾವಳಿಗಳಿವೆ. ನೈಜವಾದಂತ ಚಿತ್ರಣವನ್ನು ಜನರಿಗೆ ತೋರಿ್ಡಸಿ ರಂಜಿಸುವ ಪ್ರಯತ್ನ ಈ ನಾಟಕದಲ್ಲಿರುವ ಕಲಾವಿದರಲ್ಲಿದೆ. ಈಗಾಗಲೆ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಈ ನಾಟಕದ ಪ್ರಚಾರವನ್ನು ಮಾಡಲಾಗಿದ್ದು, ಎರಡು ದಿನಗಳ ಕಾಲ ನಡೆಯುವ ಈ ನಾಟಕವನ್ನು ಪ್ರತಿಯೊಬ್ಬರು ವೀಕ್ಷಿಸುವ ಮೂಲಕ ನಾಟಕದ ಯಶಸ್ವಿಗೆ ಸಹಕಾರ ನೀಡಬೇಕು.
ವಿರುಪಾಕ್ಷಣ್ಣ ಕ. ಮಾಮನಿ, ಬಿಜೆಪಿ ಮುಖಂಡರು ಸವದತ್ತಿ.
--------
ರಾಜ್ಯಾದ್ಯಂತ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕದ ಪ್ರದರ್ಶನ ಅತ್ಯಂತ ಯಶಸ್ಸನ್ನು ಕಾಣುತ್ತಿದ್ದು, ಚೆನ್ನಮ್ಮಳ ಶೌರ್ಯ ತ್ಯಾಗ ಬಲಿದಾನದ ಚಿತ್ರಣವನ್ನು ಈ ಮೆಘಾ ನಾಟಕದಲ್ಲಿ ಅದ್ಬುತವಾಗಿ ಕಟ್ಟಿಕೊಡಲಾಗಿದೆ. 250ಕ್ಕೂ ಹೆಚ್ಚು ಕಲಾವಿದರ ಪರಿಶ್ರಮ ಈ ನಾಟಕದಲ್ಲಿದೆ. ಈಗಾಗಲೆ 11 ಪ್ರದರ್ಶನಗಳಲ್ಲಿ ಯಶಸ್ಸು ಸಾಧಿಸಿದ್ದು, ಪುಣ್ಯ ಕ್ಷೇತ್ರ ಸವದತ್ತಿಯಲ್ಲಿ ಫೆ.15 ಮತ್ತು 16ರಂದು 12ನೇ ಪ್ರದರ್ಶನ ನಡೆಯುತ್ತಿದೆ. ಸವದತ್ತಿಯಲ್ಲಿ ನಡೆಯುತ್ತಿರುವ ಈ ನಾಟಕಕ್ಕೆ ವಿಶೇಷವಾದಂತ ಸಹಕಾರ ದೊರಕಿದ್ದು, ಇಂತಹ ಸಹಕಾರ ಎಲ್ಲೆಡೆ ಸಿಕ್ಕರೆ ನೂರಾರು ಪ್ರದರ್ಶನಗಳನ್ನು ಮಾಡುವ ಜವಾಬ್ದಾರಿ ನಮ್ಮ ತಂಡದ ಮೇಲಿದೆ. ಪ್ರತಿ ಪ್ರದರ್ಶದನದಲ್ಲಿ 30 ಸಾವಿರಕ್ಕೂ ಅಧಿಕ ಜನರು ಸೇರುತ್ತಿರುವುದು ಹೆಮ್ಮೆಯ ವಿಷಯ.
ರಮೇಶ ಪರವೀನಾಯ್ಕರ, ನಿರ್ದೇಶಕರು ರಂಗಾಯಣ ಧಾರವಾಡ