ವೃದ್ಧರಿಗಾಗಿ ಕೇಂದ್ರ ಸರಕಾರದಿಂದ ವಯೋಶ್ರೀ ಯೋಜನೆ ಜಾರಿಗೆ : ಆನಂದ ಮಾಮನಿ
ಲೋಕದರ್ಶನ ವರದಿ
ಸವದತ್ತಿ 03: ವೃದ್ಧರು ಪರಾವಲಂಬಿಯಾಗದಿರಲು ಕೇಂದ್ರ ಸರಕಾರ ವಯೋಶ್ರೀ ಯೋಜನೆ ಜಾರಿಗೆ ತಂದಿದೆ. ತಾಲೂಕಿನ 1298 ಹಿರಿಯ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಲಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜರುಗಿದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಿಸಿ ಅವರು ಮಾತನಾಡಿದರು.
ಕೋವಿಡ್ನಿಂದ ಆರ್ಥಿಕ ಹಿಂಜರಿತವಾದರೂ ಸಹ ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ವೇತನ ತಡೆ ಹಿಡಿಯದೇ ಜನತೆಗೆ ಅನುಕೂಲ ಕಲ್ಪಿಸಿದೆ ಎಂದರು.
ತಾಲೂಕಾ ಪಂಚಾಯತ ಇಓ ಯಶವಂತಕುಮಾರ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತಿಯೊಬ್ಬರಿಗೂ ಯೋಜನೆಗಳ ಪ್ರಯೋಜನ ತಲುಪಿಸಲು ಪ್ರಯತ್ನಿಸುತ್ತಿವೆ. ಸ್ಥಳಿಯ ಆಡಳಿತದಿಂದ ಹಿರಿಯ ನಾಗರಿಕರಿಗೆ ವಿಶೇಷ ಯೋಜನೆಗಳಿದ್ದು, ಅವುಗಳ ಉಪಯೋಗ ಪಡೆದುಕೊಳ್ಳಬೇಕೆಂದರು.
ರೈತ ಫಲಾನುಭಿಗಳಿಗೆ ಯಂತ್ರೋಪಕರಣ ಹಸ್ತಾಂತರ ಹಾಗೂ ನೂತನ ಪಶು ಸಂಜೀವೀನಿ ವಾಹನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಹೇಶ ಚಿತ್ತರಗಿ, ಕಾಂಚನಾ ಅಮಠೆ, ಎಚ್.ಎಸ್. ಜಗದಾರ, ಪಿ.ಎಮ್. ಚನ್ನಪ್ಪನವರ, ಎಸ್.ವಿ. ಪಾಟೀಲ, ಎಚ್. ಎ. ಕದ್ರಾಪೂರಕರ್ ಇದ್ದರು.