ವನಮಹೋತ್ಸವ ಕಾರ್ಯಕ್ರಮ ಆಚರಣೆ
ಹೊಸಪೇಟೆ(ವಿಜಯನಗರ) 08: ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಟ್ಟು, ಅರಣ್ಯವನ್ನು ಬೆಳೆಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವ ಕಾರ್ಯಕ್ರಮವು ಹೊಸಪೇಟೆಯ ವಾಲ್ಮೀಕಿ ಭವನದ ಆವರಣದಲ್ಲಿ ಶುಕ್ರವಾರದಂದು ನಡೆಯಿತು.
ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಸಿಗಳನ್ನು ವಿತರಿಸಿದರು.
ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್ ಅವರು ಅನುಪಸ್ಥಿತಿಯಲ್ಲಿ ಮುಖಂಡ ಸಿದ್ದಾರ್ಥ್ಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಗರಸಭೆಯ ಉಪಾಧ್ಯಕ್ಷ ಎಲ್.ಎಸ್.ಆನಂದ್ ಅವರು ಮಾತನಾಡಿ, ಪ್ರತಿಯೊಬ್ಬರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸಸಿಗಳನ್ನು ನೆಡುವುದರ ಮೂಲಕ ಪರಿಸರವನ್ನು ಕಾಪಾಡಬಹುದು. ಇದರಿಂದ ಮಳೆ-ಬೆಳೆ ಉತ್ತಮವಾಗುತ್ತದೆ ಇದರಿಂದ ನಾಡು ಸಮೃದ್ಧಿಯಾಗುತ್ತದೆ ಎಂದರು.
ಹೊಸಪೇಟೆಯ ವಲಯ ಅರಣ್ಯಾಧಿಕಾರಿ ಕೆ.ಸಿ.ವಿನಯ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೊಸಪೇಟೆಯ ವಾಲ್ಮೀಕಿ ಭವನದ ಆವರಣದಲ್ಲಿ 108 ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಕಮಲಾಪುರದ ವಲಯ ಅರಣ್ಯಾಧಿಕಾರಿ ಉಷಾ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಇದ್ದರು.