ಕುಡಿಯುವ ನೀರು ಸರಬರಾಜು ಕಾಮಗಾರಿಗೆ ವೈದ್ಯ ಭೂಮಿಪೂಜೆ
ಲೋಕದರ್ಶನ ವರದಿ
ಸವದತ್ತಿ 09: ಸುಮಾರು 50 ವರ್ಷಗಳ ಹಿಂದೆ ಅಂದಿನ 18ಸಾವಿರ ಜನಸಂಖ್ಯೆ ಆಧಾರಿತವಾಗಿ ನಿರ್ಮಿಸಿದ ಕುಡಿಯುವ ನೀರಿನ ಯೋಜನೆಯಿಂದ ಈಗಿರುವಂತ 50ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಸೂಕ್ತ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಾಗದೆ ಹೋಗಿದ್ದು, 92.65 ಕೋಟಿ ರೂ.ಗಳ ಯೋಜನೆಯಡಿ ಪಟ್ಟಣದ ಜನತೆಗೆ ನಿರಂತರ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಸೌಗಂಧಿಪುರದಲ್ಲಿ ಸವದತ್ತಿ ಪಟ್ಟಣಕ್ಕೆ ರಾಜ್ಯ ಸರಕಾರದ ಅನುದಾನದಡಿ ಮಲಪ್ರಭಾ ನದಿಯ ಮೂಲದಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಿರುವಂತ ನೀರೆತ್ತುವ ಜಾಕವೆಲ್ನ್ನು ಸಂಪೂರ್ಣ ಸ್ವಚ್ಚಗೊಳಿಸುವ ಕಾರ್ಯ ಮಾಡಲಾಗಿದ್ದು, 8 ದಿನಗಳಿಗೊಮ್ಮೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರನ್ನು ಈಗ 5 ದಿನಗಳಿಗೊಮ್ಮೆ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ನಿರಂತರ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷವಾದರೂ ಸಮಯ ಬೇಕಾಗಿರುವದರಿಂದ ಈಗಿರುವಂತ ವ್ಯವಸ್ಥೆಯನ್ನೆ ಸರಿಪಡಿಸಿಕೊಂಡು ಕಾಮಗಾರಿ ಪೂರ್ಣಗೊಳ್ಳುವವರೆಗೆ 4 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಶಿರೂರ ಮಾತನಾಡಿ, ಈಗ 92.65 ಕೋಟಿ ರೂ.ಗಳಲ್ಲಿ ನಿರ್ಮಿತವಾಗುತ್ತಿರುವ ನಿರಂತರ ಕುಡಿಯುವ ನೀರಿನ ಯೋಜನೆಯಿಂದ 4ರಿಂದ 5ಲಕ್ಷ ಜನಸಂಖ್ಯೆಗೆ ಬೇಕಾಗುವಷ್ಟು ನೀರನ್ನು ಪೂರೈಕೆ ಮಾಡುವಂತ ಸಾಮರ್ಥ್ಯವನ್ನಿಟ್ಟುಕೊಂಡು ಕಾಮಗಾರಿ ಆರಂಭಿಸಲಾಗಿದೆ ಎಂದರು. ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳುಗಳವರಗೆ ಕಾಲವಕಾಶ ನೀಡಲಾಗಿದ್ದು, 12 ತಿಂಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಪುರಸಭೆ ಮಾಜಿ ಅಧ್ಯಕ್ಷರಾದ ಮಹಾಬಳೇಶ್ವರ ಪುರದಗುಡಿ, ಶಿವಾನಂದ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ಶಿವನಗೌಡ ಪಾಟೀಲ, ಧರೆಪ್ಪ ಮಡ್ಲಿ, ಮಲ್ಲಿಕಾರ್ಜುನ ಪುರದಗುಡಿ, ವೀರೇಶ ಪ್ರಭುನವರ, ಮೌಲಾಸಾಬ ತಬ್ಬಲಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಮಹಾರಾಜಗೌಡ ಪಾಟೀಲ, ಪ್ರಭು ಪ್ರಭುನವರ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಮಲ್ಲಿಕಾರ್ಜುನ ಬೇವೂರ, ಎಸ್.ಆರ್.ಪಾಟೀಲ, ಬಿ.ಎನ್.ಪ್ರಭುನವರ, ಸಂತೋಷ ನರಿಯವರ, ಜೆಇ ನಿರ್ಮಲಾ ನಾಯಕ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.