ಶೀಘ್ರವೇ "ಭಾವಚಿತ್ರ" ಅನಾವರಣ
ಬೆಂಗಳೂರು, ನ. 22 ಚಕ್ರವರ್ತಿ, ಗಾನವಿ ಲಕ್ಷ್ಮಣ್ ಜೋಡಿಯ "ಭಾವಚಿತ್ರ" ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆಗೆ ಬರುತ್ತಿದೆ.
ಗಿರೀಶ್ ಕುಮಾರ್ ನಿರ್ದೇಶನದ "ಭಾವಚಿತ್ರ " ಟೆಕ್ನೋ ಥ್ರಿಲ್ಲರ್, ಸೆಂಟಿಮೆಂಟ್ ಸನ್ನಿವೇಶಗಳನ್ನು ಒಳಗೊಂಡಿದ್ದು, ಭಾವಚಿತ್ರ ಹಾಗೂ ಕ್ಯಾಮೆರಾ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ.
ಇದಷ್ಟೇ ಅಲ್ಲ. ಪ್ರೀತಿಯ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಇಡೀ ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದ ನಿರ್ದೇಶಕ ಗಿರೀಶ್ ಕುಮಾರ್, "ಆವಾಹಯಾಮಿ" ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು ಎಂದು ತಿಳಿಸಿದರು.
ನಾನು ಈ ಚಿತ್ರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಫೋಟೊಗ್ರಾಫಿ ನನ್ನ ಹವ್ಯಾಸ. ಈ ರೀತಿ ಜೀವನ ಸಾಗುತ್ತಿದ್ದಾಗ, ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಈ ರೀತಿಯ ವಿಭಿನ್ನ ಕಥೆಯೊಂದಿಗೆ ಚಿತ್ರ ಸಾಗುತ್ತದೆ. ಹಿಂದೆ "ಯಾನ" ಚಿತ್ರದಲ್ಲಿ ನಟಿಸಿದ್ದೆ. ಇದು ಕನ್ನಡದಲ್ಲಿ ಎರಡನೇ ಚಿತ್ರ ಎಂದರು ನಾಯಕ ಚಕ್ರವರ್ತಿ.
ನಾಯಕಿ ಗಾನವಿ ಲಕ್ಷ್ಮಣ್, ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. "ಮಗಳು ಜಾನಕಿ" ಧಾರಾವಾಹಿ ಸಮಯದಲ್ಲಿ ನಿರ್ದೇಶಕ ಗಿರೀಶ್ ಕುಮಾರ್ ಅವರು ಹೇಳಿದ ಕಥೆಯಿದು ಎಂದರು.