ರಾಣೆಬೆನ್ನೂರ

ಒಳಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣ: ಹೈರಾಣಾದ ಪ್ರಯಾಣಿಕರು

ಒಳಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣ: ಹೈರಾಣಾದ ಪ್ರಯಾಣಿಕರು
ರಾಣೀಬೆನ್ನೂರ ದೇವರಗುಡ್ಡ ರಸ್ತೆಯ ರೇಲ್ವೆ ಒಳಸೇತುವೆಯಲ್ಲಿ ಸಂಗ್ರಹವಾಗಿರುವ ಭಾರಿ ಪ್ರಮಾಣದ ನೀರಿನಿಂದಾಗಿ ವಾಹನ ಸವಾರರು

ರಾಣೀಬೆನ್ನೂರ 19: ಇಲ್ಲಿನ ಬಾಗಲಕೋಟೆ-ಬಿಳಿರಂಗನಬೆಟ್ಟ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ರೇಲ್ವೆ ಒಳಸೇತುವೆ ಕಾಮಗಾರಿಯು ಅವೈಜ್ಞಾನಿಕವಾಗಿದ್ದು ಇದರಿಂದಾಗಿ ಸಾರ್ವಜನಿಕರ, ರೈತರು, ಪ್ರಯಾಣಿಕರು, ವಾಹನ ಸವಾರರು ಮಳೆ ಬಂದಾಗ ಅಪಾರ ನೀರು ಸಂಗ್ರಹಣೆಗೊಡು ಒಳ ಸೇತುವೆಯಿಂದ ಪಾರಾಗಲು ಹರಸಾಹಸಪಡುವಂತಾಗಿದೆ. ರೇಲ್ವೆ ಇಲಾಖೆಯ ಈ ಅವೈಜ್ಞಾನಿಕ ಒಳಸೇತುವೆ ನಿರ್ಮಾಣದಿಂದ ರೋಸಿಹೋಗಿ ಸಿಡಿದೆದ್ದು ಕಳೆದ ಎರಡು ವರ್ಷದಿಂದ ಹೋರಾಟ ನಡೆಯುತ್ತಲೇ ಬಂದಿದೆ.  

ಹೋರಾಟಗಾರರು ಹೋರಾಟ ಅರಂಭಿಸಿದಾಗ ಜನಪರ ಕಾಳಜಿಯುಳ್ಳವರಂತೆ ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿ ಹೋರಾಟ ಅಂತ್ಯಗೊಳಿಸುತ್ತಾರೆಯೇ ಹೊರತು ಹೋರಾಟಗಾರರ ಬೇಡಿಕೆ ಈಡೇರಿಸಲು ಮುಂದಾಗುವುದಿಲ್ಲ. ರಾಜಕಾರಣಿಗಳ ಹುಸಿ ಭರವಸೆಯಿಂದ ಹೋರಾಟಗಾರರು ಬೇಸತ್ತಿದ್ದು ಶತಾಯ-ಗತಾಯ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸಬಾರದೆಂಬ ದೃಢ ಸಂಕಲ್ಪ ಹೊಂದಿ ಶೀಘ್ರದಲ್ಲಿಯೇ ಹೋರಾಟಕ್ಕೆ ಮುಂದಾಗಲು ಸಜ್ಜಾಗುತ್ತಿದ್ದಾರೆ. 

ಈ ಭಾಗದ ಸಂಸದ ಶಿವಕುಮಾರ ಉದಾಸಿಯವರು ದೇವರಗುಡ್ಡ ರಸ್ತೆ, ದೊಡ್ಡ ಪೇಟೆ ರಸ್ತೆ, ಮೇಡ್ಲೇರಿ ರಸ್ತೆಯಲ್ಲಿ ಮೇಲ್ ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದರ ಬಗ್ಗೆ ಯಾವುದೇ ಮುನ್ಸೂಚನೆಯ ಸರ್ವೇಯಾಗಲಿ, ಕಾಮಗಾರಿಯಾಗಲಿ ಪ್ರಾರಂಭವಾಗದಿರುವುದಕ್ಕೆ ಹೋರಾಟಗಾರರು ಆಕ್ರೋಶಗೊಂಡಿದ್ದಾರೆ. ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವ ರಾಜಮಾರ್ಗವಾಗಿರುವ ದೇವರಗುಡ್ಡ ರಸ್ತೆಯ ರೇಲ್ವೆ ಒಳಸೇತುವೆ ಮಳೆಬಂದರೆ ನೀರು ಸರಾಗವಾಗಿ ಹರಿದು ಹೋಗದೇ ಹಳ್ಳದ ರೂಪದಲ್ಲಿ ನಿಂತಿರುತ್ತದೆ. ಇದರಿಂದ ಕಾರು, ಬೈಕ್, ಬಸ್, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳು ಸಂಚರಿಸುವುದು ದುರ್ಲಭವಾಗಿರುತ್ತದೆ. ಈ ಸ್ಥಿತಿಯನ್ನು ಪ್ರತಿಭಟಿಸಿ ಹೋರಾಟ ಮಾಡದೇ ಹೋದರೆ ಸಮಸ್ಯೆ ಬಗೆಹರಿಯುವು ದಿಲ್ಲವಾದ್ದರಿಂದ ಹೋರಾಟ ಅನಿವಾರ್ಯವಾಗಿದೆ. 

ಆದ್ದರಿಂದ ರೇಲ್ವೆ ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಎಚೆತ್ತುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗದಿದ್ದಲ್ಲಿ ಪುನ: ಶೀಘ್ರದಲ್ಲೇ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದೆಂದು ಹೋರಾಟ ಸಮಿತಿಯ ರವೀಂದ್ರಗೌಡ ಪಾಟೀಲ, ಜಗದೀಶ ಕೆರೂಡಿ, ಪ್ರಭುಸ್ವಾಮಿ ಕರ್ಜಗಿಮಠ, ಬಿ.ಎನ್‌.ಪಾಟೀಲ, ಮಂಜುನಾಥ ಗೌಡಶಿವಣ್ಣನವರ ಮತ್ತು ಹೋರಾಟ ಸಮಿತಿಯ ನೂರಾರು ಮುಖಂಡರು ತಿಳಿಸಿದ್ದಾರೆ. 

ಸುದ್ದಿ ಓದಿ