ಏಕತೆಯೇ ಪ್ರಜಾಪ್ರಭುತ್ವಕ್ಕೆ ಜೀವಾಳ: ಡಾ. ಡಿ.ವಿ.ಪರಮಶಿವಮೂರ್ತಿ
ಹಂಪಿ 31: ಭಾರತವು ಅನೇಕ ರಾಜ್ಯಗಳ, ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳ ನೆಲೆಯಾಗಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ವಿಗೆ ಕಾರಣವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿಯ ಸಿಂಡಿಕೇಟ್ ಸಭಾಂಗಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 149ನೇ ಜನ್ಮ ದಿನಾಚರಣೆಯನ್ನು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು, ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯ ಕಾರಣದಿಂದಲೇ ಭಾರತವು ಅನೇಕ ವರ್ಷಗಳ ಕಾಲ ವಿದೇಶಿಯರ ಆಳ್ವಿಕೆಗೆ ಒಳಪಟ್ಟಿತು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದರು.
ಮುಂದುವರೆದು, ಇಂದು ಭಾರತದಲ್ಲಿ ರಾಜ್ಯಗಳು ಸ್ವತಂತ್ರವಾಗಿದ್ದರೂ ಪ್ರಬಲ ಕೇಂದ್ರ ಸರ್ಕಾರದಿಂದ ನಿಯಂತ್ರಣಕ್ಕೆ ಒಳಪಟ್ಟು ಅಖಂಡತೆಯನ್ನು ಉಳಿಸಿಕೊಂಡಿದೆ. ಸ್ವಾತಂತ್ರ್ಯದ ನಂತರದಲ್ಲಿ ಅಸ್ತಿತ್ವದಲ್ಲಿದ್ದ 562 ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತ ಕಟ್ಟುವಿಕೆಯಲ್ಲಿ ವಲ್ಲಭಭಾಯ್ ಪಟೇಲ್ ಅವರ ಪರಿಶ್ರಮವೇ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲು ಸ್ಫೂರ್ತಿ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಆಡಳಿತಾಂಗದ ಉಪಕುಲಸಚಿವರಾದ ಡಾ. ಎ.ವೆಂಕಟೇಶ ಕಾರ್ಯಕ್ರಮವನ್ನು ನಿರೂಪಿಸಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಅಧ್ಯಯನಾಂಗದ ಮುಖ್ಯಸ್ಥರಾದ ಡಾ.ಅಮರೇಶ ಯತಗಲ್ ಹಾಗೂ ಪ್ರಾಧ್ಯಾಪಕರಾದ ಡಾ.ವೆಂಕಟಗಿರಿ ದಳವಾಯಿ, ಡಾ.ಈ. ಯರಿ್ರಸ್ವಾಮಿ, ಅಲ್ಲದೇ ವಿವಿಧ ವಿಭಾಗದ ಅಧ್ಯಾಪಕರು, ಆಡಳಿತಾಂಗದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.