ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ
ನವದೆಹಲಿ, ಸೆಪ್ಟೆಂಬರ್ 11: ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ಜಾರಿ ಗೊಳಿಸಿದೆ.
ವೈದ್ಯಕೀಯ ಆಕ್ಸಿಜನ್ ಸಾಗಾಣಿಕೆಯ ಮೇಲೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸದಂತೆ ರಾಜ್ಯಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ರಾಜ್ಯಗಳ ನಡುವೆ ವೈದ್ಯಕೀಯ ಆಕ್ಸಿಜನ್ ವಾಹನಗಳ ಸಂಚಾರ, ಪೂರೈಕೆಯ ಮೇಲೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ರಾಜ್ಯಗಳು, ಕೇಂದ್ರಾಡಳಿತ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ಯನ್ನು ಜಾರಿಗೊಳಿಸಿದೆ.
ಆಸ್ಪತ್ರೆಯಲ್ಲಿ ದಾಖಲಾಗುವ ಪ್ರತಿಯೊಬ್ಬ ಕೋವಿಡ್ ರೋಗಿಗೆ ಪ್ರಾಣವಾಯು ಆಕ್ಸಿಜನ್ ಪೂರೈಕೆಯಾಗುವಂತೆ ನೋಡಿಕೊಳ್ಳುವ ಜವಬ್ದಾರಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಮೇಲಿದೆ ಎಂದು ಸ್ಪಷ್ಟಪಡಿಸಿದೆ. ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳ ನಿರ್ವಹಣೆಗಾಗಿ ಆಸ್ಪತ್ರೆಗಳಗೆ ಆಕ್ಸಿಜನ್ ಪೂರೈಕೆಯ ಪ್ರಾಮುಖ್ಯತೆಯನ್ನು ಕೇಂದ್ರ ಆರೋಗ್ಯ ಸಚಿವಾಲಯದ ಪುನರುಚ್ಚರಿಸಿದೆ.