ರಾಷ್ಟ್ರೀಯ

ಸುರೇಶ್ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ

ಸುರೇಶ್ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ

ನವದೆಹಲಿ, ಸೆ 24 : ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ ವ್ಯಕ್ತಪಡಿಸಿದೆ. ಮೃತರ ಗೌರವಾರ್ಥ ಸಂಪುಟ ಸಭೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.‘ಸಚಿವ ಸಂಪುಟ ಬುಧವಾರ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತದೆ. ಅವರ ನಿಧನದಿಂದ ದೇಶ, ಪ್ರಮುಖ ನಾಯಕರೊಬ್ಬರನ್ನು, ಉತ್ತಮ ಸಂಸದೀಯಪಟುವನ್ನು, ಸಮರ್ಥ ಆಡಳಿತಾಗಾರರೊಬ್ಬರನ್ನು ಕಳೆದುಕೊಂಡಿದೆ. ’ ಎಂದು ಸಂಪುಟ ಸಭೆ ಹೊರಡಿಸಿದ ಸಂತಾಪ ನಿರ್ಣಯದಲ್ಲಿ ಹೇಳಲಾಗಿದೆ.

‘ಮೃತರ ಕುಟುಂಬಕ್ಕೆ ಸರ್ಕಾರ ಮತ್ತು ಇಡೀ ದೇಶದ ಪರವಾಗಿ ಕೇಂದ್ರ ಸಚಿವ ಸಂಪುಟ ಸಂತಾಪ ಸೂಚಿಸುತ್ತದೆ.’ ಎಂದು ನಿರ್ಣಯದಲ್ಲಿ ಹೇಳಲಾಗಿದೆ. 1955ರ ಜೂನ್ 1ರಂದು ಬೆಳಗಾವಿ ಜಿಲ್ಲೆಯ ಕೆ ಕೆ ಕೊಪ್ಪ ಗ್ರಾಮದಲ್ಲಿ ಜನಿಸಿದ ಅಂಗಡಿಯವರು, ಕಾಲೇಜು ಶಿಕ್ಷಣವನ್ನು ಬೆಳಗಾವಿಯ ಎಸ್ ಎಸ್ ಎಸ್ ಸಮಿತಿ ಕಾಲೇಜಿನಲ್ಲಿ ಪಡೆದಿದ್ದರು. ಪದವಿ ನಂತರ ಬೆಳಗಾವಿಯ ರಾಜಾ ಲಖಮ್ ಗೌಡ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. 

ರಾಜಕೀಯ ಪ್ರವೇಶದ ಆರಂಭದಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯರಾಗಿದ್ದ ಅವರು 1996ರಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿದ್ದರು. 2001ರಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು. 2004ರಲ್ಲಿ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದಿದ್ದರು. ನಂತರ 2009, 2014 ಮತ್ತು 2019ರಲ್ಲಿ ಇದೇ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು. 


ಸುದ್ದಿ ಓದಿ