ಸೋಗಿ ಗ್ರಾಮದ ಹಾಸ್ಟೆಲ್ಗೆ ಜಿ.ಪಂ. ಸಿಇಒ ಅನೀರೀಕ್ಷಿತ ಭೇಟಿ
ಹೊಸಪೇಟೆ(ವಿಜಯನಗರ),ಅ.9: ಹಡಗಲಿ ತಾಲೂಕಿನ ಸೋಗಿ ಗ್ರಾಮದ ವಿದ್ಯಾರ್ಥಿ ನಿಲಯ, ಪ್ರೌಢ ಶಾಲೆ ಹಾಗೂ ಗ್ರಾಮ ಪಂಚಾಯಿತಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಅವರು ಅನೀರೀಕ್ಷಿತ ಭೇಟಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿನ ಶುದ್ಧ ಕುಡಿಯುವ ನೀರಿನ ಎರಡು ಯುನಿಟ್ಗಳು ದುರಸ್ತಿಯಲ್ಲಿರುವುದನ್ನು ಗಮನಿಸಿದರು. ಮೂಲಭೂತ ಸೌಕರ್ಯಗಳು ಹಾಗೂ ಇತರೆ ವ್ಯವಸ್ಥೆಯನ್ನು ಪರೀಶೀಲಿಸಿದರು. ಈ ಬಗ್ಗೆ ಹಾಜರಿದ್ದ ವಾರ್ಡನ್ ರಫಿಕ್ ಅವರಿಗೆ ಕೂಡಲೇ ಸರಿಪಡಿಸಿ ಛಾಯಾಚಿತ್ರ ಸಹಿತ ವರದಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಸೂಚಿಸಿದರು.
ಪರೀಶೀಲನೆ ಸಂದರ್ಭದಲ್ಲಿ ದಾಸ್ತಾನು ಪುಸ್ತಕ ಕೇಳಿದಾಗ ವಾರ್ಡನ್ ಮನೆಯಲ್ಲಿದೆ ಎಂದು ಹೇಳಿದರು. ಹಾಸ್ಟೇಲ್ ದಾಖಲೆ ಹಾಸ್ಟೆಲ್ನಲ್ಲಿಯೇ ಇರಬೇಕು. ದಾಸ್ತಾನು ನಮೂದಿಸಬೇಕು ಎಂದು ಹೇಳಿದರು. ಪರೀಶೀಲನೆಗೆ ಬಂದ ಅಧಿಕಾರಿಗಳಿಗೆ ಹಾಜರುಪಡಿಸಬೇಕು ಎಂದು ಹೇಳಿದರು. ಇನ್ನು ಮುಂದೆ ಈ ಅವ್ಯವಸ್ಥೆ ಮುಂದುವರಿದಲ್ಲಿ ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಸೋಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಶೌಚಾಲಯ ನಿರ್ವಹಣೆ ಇಲ್ಲದೇ ಹಾಳಾಗಿರುವುದನ್ನು ಗಮನಿಸಿದರು. ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶೌಚಾಲಯಗಳನ್ನು ಸರಿಪಡಿಸಿ ಮುಖ್ಯೋಪಾಧ್ಯಾಯರ ಸುಪರ್ಧಿಗೆ ನೀಡಲಾಗಿತ್ತು. ಎಂದು ಪಿಡಿಒ ಮಾಹಿತಿ ನೀಡಿದರು. ಈ ಬಗ್ಗೆ ಕೂಡಲೇ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು. ನೋಟಿಸ್ ಸಹ ಜಾರಿ ಮಾಡುವುದಾಗಿ ತಿಳಿಸಿದರು.
ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ರೈತರ ಅನುಕೂಲಕ್ಕಾಗಿ 10 ಲಕ್ಷ ರೂ. ವೆಚ್ಚದಲ್ಲಿ ಕೃಷಿ ಸಾಮಗ್ರಿಗಳನ್ನು ಒಕ್ಕೂಟಕ್ಕೆ ನೀಡಲಾಗಿತ್ತು. ಆದರೆ ಅವು ಸಮರ್ಕವಾಗಿ ಬಳಕೆಯಾಗದೇ ಧೂಳು ಹಿಡಿದಿರುವುದನ್ನು ಗಮನಿಸಿದರು.
ಗ್ರಾಮದ ರೈತರಿಗೆ ಮನವೊಲಿಸಿ ಬಳಕೆಗೆ ಪ್ರೇರೇಪಿಸಿ ಇವುಗಳ ಸದುಪಯೋಗ ಆಗುವಂತೆ ನೋಡಿಕೊಂಡಾಗ ಒಕ್ಕೂಟವು ಲಾಭಗಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮವಹಿಸಲು ಒಕ್ಕೂಟದ ಸದಸ್ಯರಿಗೆ ತಿಳಿಸಿದರು.
ಗ್ರಾಮದ ಹೊಂಬೆಳಕು ವಿಕಲಚೇತನ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಆರಂಭಿಸಲಾಗಿರುವ ತೋಟಗಾರಿಕೆ ನರ್ಸರಿಗೆ ಭೇಟಿ ನೀಡಿದರು. ಬೆಳೆಯಲಾಗಿರುವ ಲಿಂಬು, ನುಗ್ಗೆ , ಶ್ರೀಗಂಧ ಹಾಗೂ ಕರಿಬೇವಿನ ಸಸಿಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ನರ್ಸರಿಗೆ ಶೇಡ್ ನೆಟ್ನ ಅವಶ್ಯಕತೆ ಇದ್ದು ಅದನ್ನು ಪೂರೈ ಸಿಕೊಡುವಂತೆ ಸ್ವ ಸಹಾಯ ಸಂಘದ ಸದಸ್ಯರು ಬೇಡಿಕೆ ಸಲ್ಲಿಸಿದರಲ್ಲದೇ ತಮ್ಮಲ್ಲಿನ ಕೆಲ ಸದಸ್ಯರಿಗೆ ನರೇಗಾದಿಂದ ಕೂಲಿ ಪಾವತಿಯಾಗಿಲ್ಲ ಪಾವತಿಗೆ ಕ್ರಮಕೈಗೊಳ್ಳುವಂತೆ ಬೇಡಿಕೆ ಸಲ್ಲಿಸಿದರು. ಈ ಬಗ್ಗೆ ಹಡಗಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಗರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸಹಾಯಕ ನಿರ್ದೇಶಕ (ನರೇಗಾ) ಹೇಮಾದ್ರಿ ನಾಯ್ಕ ಅವರಿಗೆ ಸೂಚಿಸಿದರು. ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿ ಯೋಜನೆ ಮತ್ತು ನರೇಗಾ ಯೋಜನೆಯ ರಾಜೀವ ಗಾಂಧೀ ಸೇವಾ ಕೇಂದ್ರದ ಮೂಲಕ ಸಮಾರು 40 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಹೊಸಕಟ್ಟಡ ನಿರ್ಮಾಣವು ಕಳೆದ ಮೂರು ವರ್ಷಗಳಿಂದ ತಾಂತ್ರಿಕ ಹಾಗೂ ಇಚ್ಛಾಶಕ್ತಿಯ ಕೊರತೆಯಂದ ಲಿಂಟೆಲ್ ಹಂತದಲ್ಲಿಯೇ ಸ್ಥಗಿತಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಿಸಿದವರಿಗೆ ಕಟ್ಟಡ ಕಾಮಗಾರಿ ಅರಂಭಿಸಲು ಸೂಚನೆ ನೀಡುವುದಾಗಿ ತಿಳಿಸಿದರು.