ರಾಷ್ಟ್ರೀಯ

ಶೋಪಿಯಾನ್ ಎನ್‍ಕೌಂಟರ್ : ಇಬ್ಬರು ಅಪರಿಚಿತ ಉಗ್ರರ ಹತ್ಯೆ

ಶೋಪಿಯಾನ್ ಎನ್‍ಕೌಂಟರ್ : ಇಬ್ಬರು ಅಪರಿಚಿತ ಉಗ್ರರ ಹತ್ಯೆ

ಶ್ರೀನಗರ, ಅಕ್ಟೋಬರ್ 07: ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಮಂಗಳವಾರ ಭಯೋತ್ಪಾದಕರ ಶೋಧಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಭದ್ರತಾ ಪಡೆಗಳು ಬುಧವಾರ ಹತ್ಯೆ ಮಾಡಿವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ), ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಮತ್ತು ಸಿಆರ್‌ಪಿಎಫ್ ಜಂಟಿ ಶೋಧ ಕಾರ್ಯಾಚರಣೆಯನ್ನು ಶೋಪಿಯಾನ್‌ನ ಸಜ್ಜಾದ್ ಮೊಹಲ್ಲಾ ಸುಗನ್ ಜೈನ್‌ಪೋರಾದಲ್ಲಿ ಮಂಗಳವಾರ ಸಂಜೆಯಿಂದ ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ನಿರ್ಗಮನ ಸ್ಥಳಗಳನ್ನು ಮೊಹರು ಮಾಡಿದ ನಂತರ ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿರುವಾಗ, ಅಲ್ಲಿ ಅಡಗಿಕೊಂಡಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ವಿವೇಚನೆಯಿಲ್ಲದೆ ಗುಂಡು ಹಾರಿಸಿದರು.  ಈ ವೇಳೆ ಭದ್ರತಾ ಪಡೆಗಳು ಸೂಕ್ತ ತಿರುಗೇಟು ನೀಡಿದವು. 

ರಾತ್ರಿಯ ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತಾದರೂ, ಉಗ್ರರು ಪರಾರಿಯಾಗುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಯಿತು.

ಬುಧವಾರ ಬೆಳಿಗ್ಗೆ ನಸುಕಿನಲ್ಲಿ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ.  ಬೆಳಿಗ್ಗೆ ನಡೆದ ಹೊಸ ಎನ್‌ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

ಸುದ್ದಿ ಓದಿ