ಸೌಂದತ್ತಿ

ನೀರಿನ ಟ್ಯಾಂಕಿನಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

ನೀರಿನ ಟ್ಯಾಂಕಿನಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

ಲೋಕದರ್ಶನ ವರದಿ 


ಸವದತ್ತಿ 11: ಪಟ್ಟಣದ ಗುರ್ಲಹೊಸೂರಿನಲ್ಲಿ ನಿರ್ಮಿಸಿರುವ ವಾಲ್ಮೀಕಿ ಭವನ ಕಟ್ಟಡದ ಪಕ್ಕದಲ್ಲಿನ ನೀರಿನ ಟ್ಯಾಂಕಿನಲ್ಲಿ ಮಂಗಳವಾರ ಮುಂಜಾನೆ ನಾಲ್ಕು ವರ್ಷದ ಇಬ್ಬರು ಬಾಲಕರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಇದಕ್ಕೆ ಭೂಸೇನಾ ನಿಗಮದ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎನ್ನಲಾಗುತ್ತಿದೆ. 

ಮೃತಪಟ್ಟ ಬಾಲಕರಾದ ಶ್ಲೋಕ ಶಂಭುಲಿಂಗ ಗುಡಿ (4) ಹಾಗೂ ಚಿದಾನಂದ ಪ್ರಕಾಶ ಸಾಳುಂಕೆ (6) ಎಂದು ಗುರುತಿಸಲಾಗಿದೆ.  

ಸರಕಾರದ ಯೋಜನೆಗಳನ್ನು ಸಮರ​‍್ಕವಾಗಿ ಪೂರ್ಣಗೊಳಿಸದೆ ನಿರ್ಲಕ್ಷವಹಿಸಿದ ಹಿನ್ನೆಲೆಯಲ್ಲಿ ಎರಡು ಹಸುಳೆಗಳು ಇಂದು ಬಲಿಯಾಗಿದ್ದು, ಮೃತಪಟ್ಟ ಬಾಲಕರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಕ ಶ್ಲೋಕ ಶಂಭುಲಿಂಗ ಗುಡಿ ಈತನ ತಂದೆ ತಾಯಿಯವರು ಮೃತಪಟ್ಟಿದ್ದು, ಅನಾಥ ಬಾಲಕನನ್ನು ಸವದತ್ತಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸ ಕೆಲಸ ಮಾಡುತ್ತಿರುವ ಬಾಲಕನ ತಂದೆಯ ಸಹೋದರಿ ಹಾಗೂ ಬಾಲಕನ ಅತ್ತೆಯಾದ ದೇವಿಕಾ ಗುಡಿ ಸಾಕುತ್ತಿದ್ದಾಳೆ ಎನ್ನಲಾಗಿದೆ. 

ವಾಲ್ಮೀಕಿ ಭವನ ನಿರ್ಮಾಣಕ್ಕೆ 1.5ಕೋಟಿ ರೂ.ಗಳ ಮಂಜೂರಾಗಿದ್ದು, 1.5ಕೋಟಿ ರೂ.ಗಳಲ್ಲಿ ಕೇವಲ 75 ಲಕ್ಷ ರೂ.ಗಳು ಮಾತ್ರ ಬಿಡುಗಡೆಯಾಗಿರುವದರಿಂದ ಇನ್ನುಳಿದಂತ ಕಾಮಗಾರಿಗಳು ಪೂರ್ಣಗೊಳ್ಳದೆ ವಿಳಂಬವಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಣೆ ನೀಡುತ್ತಿದ್ದಾರೆ. ಆದರೆ ಇಲ್ಲಿಯ ಪರಸ್ಥಿತಿ ಬೇರೆನೆ ಇದೆ. ವಾಲ್ಮೀಕಿ ಭವನದ ಪಕ್ಕದಲ್ಲಿ ಶೌಚಾಲಯ ನಿರ್ಮಾಣ ಮಾಡುವ ಉದ್ದೇಶದಿಂದ ಇಲ್ಲಿ ಸೇಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿದೆ. ಈ ಟ್ಯಾಂಕಿನ ಮೇಲ್ಭಾಗವನ್ನು ಮುಚ್ಚಿ ಪೂರ್ಣಗೊಳಿಸಲು ಹೆಚ್ಚಿನ ಅನುದಾನದ ಅವಶ್ಯಕತೆ ಇಲ್ಲದಾಗಿದ್ದು, ನಿರ್ಲಕ್ಷತೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. 

ಕಳೆದ ಎರಡು ವರ್ಷಗಳ ಹಿಂದೆ ಎಮ್ಮೆ ಕರಗಳು ಈ ಟ್ಯಾಂಕಿನಲ್ಲಿ ಬಿದ್ದಿರುವದನ್ನು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರೂ ಸಹಿತ ನಿರ್ಲಕ್ಷವಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಂದು ಏನಾದರೂ ಅಧಿಕಾರಿಗಳು ಮಾನವೀಯ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಟ್ಯಾಂಕಿನ ಮೇಲ್ಭಾಗವನ್ನು ಮುಚ್ಚಿದ್ದರೆ ಇಂದು ಎರಡು ಜೀವಗಳು ಬಲಿಯಾಗುವದನ್ನು ತಪ್ಪಿಸಬಹುದಾಗಿತ್ತು. ಯಾರೋ ಮಾಡಿದ ತಪ್ಪು ಹಾಗೂ ನಿರ್ಲಕ್ಷತೆಯಿಂದಾಗಿ ಮುಂದೆ ಬಾಳಿ ಬದುಕಬೇಕಿದ್ದ ಇಬ್ಬರು ಬಾಲಕರು ತಮ್ಮ ಜೀವಕಳೆದುಕೊಳ್ಳುವಂತಾಗಿದೆ. 

ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 


ಸುದ್ದಿ ಓದಿ