ಅಭಿನಂದನಾ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ: ಕೊಲ್ಲೂರ
ತಾಳಿಕೋಟಿ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ವಿವಿಧ ಪಕ್ಷಗಳನ್ನು ಪ್ರತಿನಿಧಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಶಾಸಕರು ಹಾಗೂ ಕೆಲವರು ಸಚಿವರೂ ಆಗಿದ್ದಾರೆ. ಹಾಗೂ ಪ್ರಸ್ತುತ ಲೋಕಸಭೆಯಲ್ಲಿ ಸಂಸದರು ಕೂಡಾ ಆಗಿದ್ದಾರೆ. ಅವರೆಲ್ಲರನ್ನೂ ಅಭಿನಂದಿಸಲು ಜುಲೈ 5 ರಂದು ಬೆಂಗಳೂರಿನಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಕೊಲ್ಲೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ವೇದಿಕೆಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜಕೀಯ ಕ್ಷೇತ್ರಕ್ಕೆ ನಮ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ವೇದಿಕೆಯು ನಮ್ಮ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ನೂತನ ಶಾಸಕ, ಸಚಿವರು ಹಾಗೂ ಹಾಲಿ ಸಂಸದರನ್ನೂ ಅಭಿನಂದಿಸುವ ಈ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.
ವೇದಿಕೆಯ ಹಿ ತಾಲೂಕಾ ಅಧ್ಯಕ್ಷ ಸುರೇಶಕುಮಾರ ಇಂಗಳಗೇರಿ (ಪೀರಾಪೂರ) ಮಾತನಾಡಿ ಈ ಸಮಾರಂಭ ನಮ್ಮೆಲ್ಲರ ಸ್ವಾಭಿಮಾನದ ವಿಷಯವಾಗಿದೆ ನಾವೆಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸಲು ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ನಮ್ಮ ತಾಲೂಕಿನಿಂದ ಹೆಚಿನ ಸಂಖ್ಯೆಯಲ್ಲಿ ಸಮಾಜಬಾಂಧವರನ್ನು ಕರೆತರಲಾಗುವುದು ಎಂದರು.
ಸಭೆಯಲ್ಲಿ ವೇದಿಕೆ ಉಪಾಧ್ಯಕ್ಷ ಬಾಪುಗೌಡ ಪಾಟೀಲ, ಮುದ್ದೇಬಿಹಾಳ ತಾಲೂಕಾಧ್ಯಕ್ಷ ಸಿದ್ದನಗೌಡ ಲಕ್ಕುಂಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಣಮಂತ್ರಾಯ ಹಾಲರಡ್ಡಿ, ತಾಲೂಕಾ ಪ್ರ. ಕಾರ್ಯದರ್ಶಿ ನಿಂಗನಗೌಡ ಪಾಟೀಲ, ಮುಖಂಡರಾದ ಮುತ್ತುಗೌಡ ಬಿರಾದಾರ (ಕಾರಗನೂರ), ಬಸವರಾಜ ಹಡಪದ, ಗ್ರಾ.ಪಂ. ಸದಸ್ಯ ಮುಷಾವಲಿ ಮುಜಾವರ ಉಪಸ್ಥಿತರಿದ್ದರು.