ವಿಜಯಪುರ

ತಾಂಬಾ ಗ್ರಾಮದಿಂದ ತುಳಜಾಪುರಕ್ಕೆ ಪಾದಯಾತ್ರೆ

ತಾಂಬಾ ಗ್ರಾಮದಿಂದ ತುಳಜಾಪುರಕ್ಕೆ ಪಾದಯಾತ್ರೆ

ಇಂಡಿ 23: ತಾಲ್ಲೂಕಿನ ತಾಂಬಾ ಸೇರಿದಂತೆ  ವಿವಿಧ ಗ್ರಾಮಗಳ  ಭಕ್ತರು ಮಹಾರಾಷ್ಟ್ರದ ತುಳಜಾಪುರದತ್ತ ಪಾದಯಾತ್ರೆ ಕೈಗೊಂಡಿದ್ದಾರೆ. ನವರಾತ್ರಿ ಹಾಗೂ ಕೊಜಾಗಿರಿ ಹುಣ್ಣಿಮೆಯ ಧಾರ್ಮಿಕ ಸಂಭ್ರಮದ ಹಿನ್ನೆಲೆಯಲ್ಲಿ ಭಕ್ತರು ತಂಡೋಪತಂಡವಾಗಿ ಅಂಬಾ ಭವಾನಿ  ದೇವಿಯ ದರ್ಶನಕ್ಕಾಗಿ ತೆರಳುತ್ತಿದ್ದಾರೆ. ತಾಂಬಾ, ಚಿಕ್ಕರುಗಿ, ಕಡ್ಲೆವಾಡ, ಬಂಥನಾಳ, ಗಂಗನಹಳ್ಳಿ, ಹಿಟ್ನಳ್ಳಿ, ಕೆಂಗನಾಳ, ಬೆನಕನಹಳ್ಳಿ, ಶಿರಕನಹಳ್ಳಿ, ಗೊರನಾಳ, ಬನಹಟ್ಟಿ   ಸೇರಿದಂತೆ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ತುಳಜಾಪುರದತ್ತ ಸಾಗುತ್ತಿದ್ದಾರೆ. ಇನ್ನೂ ಕೆಲ ಭಕ್ತರು ತಾಂಬಾ ಹಾಗೂ ಸುತ್ತಮುತ್ತಲಿನ  ವಾಹನಗಳ ಮೂಲಕ ಸೋಲಾಪುರಕ್ಕೆ ತೆರಳಿ, ಅಲ್ಲಿಂದ ಪಾದಯಾತ್ರೆ ಆರಂಭಿಸುತ್ತಿದ್ದಾರೆ. ಒಟ್ಟಾರೆ ಭಕ್ತರ ಸಂಖ್ಯೆ ಲಕ್ಷಕ್ಕೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.ಭಕ್ತರು ಅ. 25ರ ಭಾನುವಾರ ತುಳಜಾಪುರದಲ್ಲಿ ನಡೆಯುವ ಕೊಜಾಗಿರಿ ಪೂರ್ಣಿಮೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು,  ತುಳಜಾಭವಾನಿ ದೇವಿಯ ದರ್ಶನ ಪಡೆಯಲಿದ್ದಾರೆ. ಭಕ್ತರಿಗೆ ಊಟ, ವಸತಿ ವ್ಯವಸ್ಥೆಪಾದಯಾತ್ರೆಯಲ್ಲಿ ಸಾಗುತ್ತಿರುವ ಭಕ್ತರ ಅನುಕೂಲಕ್ಕಾಗಿ ಸುಮಾರು 20 ಜನರ ತಂಡಗಳು ವಾಹನ ವ್ಯವಸ್ಥೆ ಮಾಡಿಕೊಂಡಿದ್ದು, ಅವುಗಳಲ್ಲಿ ಊಟ, ಹಾಸಿಗೆ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇಂಡಿಯಿಂದ ಕರ್ನಾಟಕದ ಧೂಳಖೇಡದವರೆಗೆ ಹಾಗೂ ಹಲಸಂಗಿ ಕ್ರಾಸ್ನಿಂದ ಭೀಮಾನದಿ ಸೇತುವೆಯವರೆಗೆ ಪಾದಯಾತ್ರಿಗಳಿಗೆ ಅನುಕೂಲವಾಗುವಂತೆ ವಾಹನ ಮತ್ತು ಪಾದಯಾತ್ರೆಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯ ಮಾರ್ಗದುದ್ದಕ್ಕೂ ವಿವಿಧೆಡೆ ಭಕ್ತರಿಗೆ ಪ್ರಸಾದ, ಕುಡಿಯುವ ನೀರು, ಓಷಧ, ಚಹಾ, ಉಪಾಹಾರ, ಶಿರಾ, ಇಡ್ಲಿ, ಬಾಳೆಹಣ್ಣು ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಹಲವು ಗ್ರಾಮಗಳಲ್ಲಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಂಬಾ ಗ್ರಾಮ  ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಸಮುದಾಯ ಭವನಗಳು ಮತ್ತು ದೇವಸ್ಥಾನಗಳಲ್ಲಿ ಪಾದಯಾತ್ರಿಗಳಿಗೆ ರಾತ್ರಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಕೆಲವು ಕಡೆ ಬೆಳಿಗ್ಗೆ ಸ್ನಾನಕ್ಕೆ ಬಿಸೀನೀರು ಒದಗಿಸಲಾಗುತ್ತಿದೆ. ರಸ್ತೆ ಬದಿಯ ತೋಟಗಳಲ್ಲಿಯೂ ಭಕ್ತರು ವಿಶ್ರಾಂತಿ ಪಡೆಯುತ್ತಿದ್ದಾರೆ. ಪೊಲೀಸ್, ಆರೋಗ್ಯ ಇಲಾಖೆಯಿಂದ ಸಹಕಾರ ಆರೋಗ್ಯ ಇಲಾಖೆಯ ಸಿಬ್ಬಂದಿ ಆಂಬುಲೆನ್ಸ್‌ ವ್ಯವಸ್ಥೆಯೊಂದಿಗೆ ಸನ್ನದ್ಧರಾಗಿದ್ದು, ಭಕ್ತರಿಗೆ ಆರೋಗ್ಯ ಸಮಸ್ಯೆ ಎದುರಾದಲ್ಲಿ ತಕ್ಷಣ ನೆರವು ನೀಡುತ್ತಿದ್ದಾರೆ. ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ನಿರಂತರವಾಗಿ ಸ್ಥಳಗಳಿಗೆ ಭೇಟಿ ನೀಡಿ ಪಾದಯಾತ್ರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ತಾಂಬಾ ಗ್ರಾಮದ ಭಕ್ತರಾದ ಬಸು ಹೊಸಮನಿ, ಶಿವಲಿಂಗಯ್ಯ ಅರೇಕರ್, ಶ್ರೀಶೈಲ್ ಹೋರ್ತಿ,  ಶ್ರೀಶೈಲ್ ಜಕಾತಿ, ವಿಠ್ಠಲ್  ಹೋತಿ, ಸಂತೋಷ್ ಮಾಳ್ಗೆ, ರಾಮಣ್ಣ ಹೊರಪೇಟಿ, ಶಿವಯೋಗಪ್ಪ ಕಂಬಾರ, ಜಗದೇವಿ ಕುಂಬಾರ,  ಶ್ರೀದೇವಿ ಹತ್ತಳ್ಳಿ, ಲಕ್ಷ್ಮಿ ಬಡಿಗೇರ,ಶೋಭಾ ಮಾದರ, ಕವಿತಾ  ಬೇನೂರ, ಕಾಶಿಬಾಯಿ ತಳವಾರ,  ರೇಖಾ ಶಿವಣಗಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ