ವಿಜಯಪುರ

ದಸರಾ ಹಬ್ಬದ ಅಂಗವಾಗಿ ಜನರೊಂದಿಗೆ ಸಚಿವರ ಕುಶಲೋಪರಿ

ದಸರಾ ಹಬ್ಬದ ಅಂಗವಾಗಿ ಜನರೊಂದಿಗೆ ಸಚಿವರ ಕುಶಲೋಪರಿ

    ವಿಜಯಪುರ 22: ದಸರಾ ಹಬ್ಬದ ಅಂಗವಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಇಂದು ಗುರುವಾರ ನಗರದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೋಂಡರು. 


ವಿಜಯಪುರ, ಬಾಗಲಕೋಟೆ ಸೇರಿದಂತೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ, ನಾನಾ ಗಣ್ಯರು, ಮುಖಂಡರು, ರೈತರು, ಹಿರಿಯರು, ಮಹಿಳೆಯರು, ಮಕ್ಕಳು, ನಾನಾ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡ ಸಚಿವರು ಶುಭ ಕೋರಿದರು. 


ಈ ಸಂದರ್ಭದಲ್ಲಿ ಉಭಯ ಕುಶಲೋಪರಿ ವಿಚಾರಿಸಿದ ಸಚಿವರು, ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಎಲ್ಲರೂ ಸಾಕಷ್ಟು ಗಿಡ ನೆಡಬೇಕು.  ನೀರನ್ನು ಹಿತವಾಗಿ, ಮಿತವಾಗಿ ಬಳಸಬೇಕು ಎಂದು ಆತ್ಮೀಯ ಸಲಹೆ ನೀಡಿದರು.  ಇದೇ ವೇಳೆ ರೈತರು ಕೆರೆಗಳಿಗೆ ನೀರು ಬಂದಿಲ್ಲ.  ಕಾಲುವೆಗಳಿಗೆ ನೀರು ಹರಿಸಿಲ್ಲ ಎಂದು ತೋಡಿಕೊಂಡ ಅಳಲು ಆಲಿಸಿದರು.


ಹಾಲಿ, ಮಾಜಿ ಶಾಸಕರಾದಿಯಾಗಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ಸಚಿವರನ್ನು ಭೇಟಿಯಾಗಿ ಸಚಿವರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡಿರು.  ಸಚಿವರ ಪುತ್ರ ಮತ್ತು ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರೊಂದಿಗೆ ದಸರಾ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. 


ಸುದ್ದಿ ಓದಿ