ಹೊರಗುತ್ತಿಗೆ ನೇಮಕಾತಿಯಲ್ಲಿ ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಜಿಲ್ಲಾಧ್ಯಕ್ಷ ವಿನೋದ ಖೇಡ ಆಗ್ರಹ
ಲೋಕದರ್ಶನ ವರದಿ
ವಿಜಯಪುರ 22: ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಹೊರಗುತ್ತಿಗೆ ಆಧಾರಿತ ನೇಮಕಾತಿ ಪ್ರಕ್ರಿಯೆಯಲ್ಲಿ ಕನಿಷ್ಠ ಇಬ್ಬರು ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ವಿಜಯಪುರ ನಗರ ಮತಕ್ಷೇತ್ರದ ಶಾಸಕ ಬಸನಗೌಡ ಆರ್. ಪಾಟೀಲ (ಯತ್ನಾಳ) ಅವರಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ವಿಜಯಪುರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ವಿಜಯಪುರ ಜಿಲ್ಲಾಧ್ಯಕ್ಷ ವಿನೋದ ಖೇಡ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ವಿಕಲಚೇತನರು ಉನ್ನತ ಶಿಕ್ಷಣ ಪಡೆದಿದ್ದರೂ ಉದ್ಯೋಗ ದೊರೆಯದೆ ನಿರುದ್ಯೋಗಿಗಳಾಗಿ ಉಳಿದಿದ್ದಾರೆ.
ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾಯ್ದೆ ಮತ್ತು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ, ಸ್ಥಳೀಯ ಮಟ್ಟದಲ್ಲಿ ಅವುಗಳ ಸಮರ್ಕ ಅನುಷ್ಠಾನವಾಗದ ಕಾರಣ ಅರ್ಹ ವಿಕಲಚೇತನರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಎಂದರು.
ವಿಕಲಚೇತನರ ಹಕ್ಕುಗಳ ಅಧಿನಿಯಮ, 2016ರ ಆಶಯದಂತೆ ವಿಕಲಚೇತನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಕನಿಷ್ಠ ಇಬ್ಬರು ವಿಕಲಚೇತನರಿಗೆ ಉದ್ಯೋಗ ನೀಡುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಕಡ್ಡಾಯವಾಗಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಅಂಗವಿಕಲರ ಹಕ್ಕುಗಳ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಪತ್ರ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳ ಪತ್ರವನ್ನು ಉಲ್ಲೇಖಿಸಿರುವ ಮನವಿದಾರರು, ವಿಕಲಚೇತನರು ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗ ಪಡೆದು ಗೌರವಯುತವಾಗಿ ಜೀವನ ನಡೆಸಲು ಸರ್ಕಾರ ನೆರವಾಗಬೇಕು ಎಂದು ಹೇಳಿದರು.
ಜಿಲ್ಲೆಯ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎ.ಎ.ವಾಲೀಕಾರ, ಲಾಯಪ್ಪ ಇಂಗಳೆ, ಎ.ಟಿ.ಗುನ್ನಾಪುರ, ಗಣೇಶ ಡೋಣೂರ, ಅನಿಲ ಇಕ್ಕಡಿ, ಮಹಾದೇವಪ್ಪ ತೇಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.