ಸಾರಿಗೆ ನೌಕರರ ಮುಷ್ಕರ: ಪರದಾಡಿದ ಪ್ರಯಾಣಿಕರು
ಬೈಲಹೊಂಗಲ08: ಸಾರಿಗೆ ಇಲಾಖೆಯ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಪ್ರಾರಂಭಿಸಿದ ಅನಿರ್ಧಿಷ್ಟ ಅವಧಿ ಮುಷ್ಕರದಿಂದ ಪಟ್ಟಣ ಸೇರಿ ತಾಲೂಕಿನಾದ್ಯಂತ ಪ್ರಯಾಣಿಕರು ಸಂಚಾರಕ್ಕಾಗಿ ಪರದಾಡಿದರು. ಮುಂಜಾನೆಯಿಂದಲೇ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ್ದರಿಂದ ಬಸ್ಸ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್ಸ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮುಷ್ಕರದ ಕುರಿತು ಮಾಹಿತಿ ಇಲ್ಲದ ಪ್ರಯಾಣಿಕರು ಬಸ್ಸ ನಿಲ್ದಾಣಕ್ಕೆ ಬಂದು ಮುಷ್ಕರದ ಸುದ್ದಿ ತಿಳಿದು ಅನಿವಾರ್ಯವಾಗಿ ಖಾಸಗಿ ವಾಹನಗಳಿಗೆ ಮೊರೆ ಹೋದರು.
ಸಾರಿಗೆ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ ಮಾತನಾಡಿ, ಬಸ್ಸ ಒಡಾಟ ಸ್ಥಗಿತಗೊಂಡರೆ ಬೈಲಹೊಂಗಲ ಡಿಪೋಗೆ ಪ್ರತಿ 11 ಲಕ್ಷ ರೂ. ಹಾನಿಯಾಗಲಿದೆ ಎಂದು ಮಾಹಿತಿ ನೀಡಿ, ಯಾವುದೇ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದ್ದರಿಂದ 114 ಬಸ್ಸುಗಳನ್ನು ಬಸ್ಸ ನಿಲ್ದಾಣದ ಒಳಗಡೆ ನಿಲುಗಡೆ ಮಾಡಲಾಗಿದ್ದು, ಪ್ರತಿ ದಿನ 114 ರೂಟಗಳಲ್ಲಿ ತೆರಳುತ್ತಿದ್ದ ಯಾವುದೇ ರೂಟಗೆ ಬಸ್ಸ್ ಸಂಚಾರದ ಅನೂಕೂಲವಾಗಿಲ್ಲ. ಮೊಬೈಲ್ ಮೂಲಕ, ಸ್ಥಳೀಯ ಸಿಬ್ಬಂದಿಯ ಮನೆ, ಮನೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ವಿನಂತಿಸಿಕೊಂಡರು ಯಾವುದೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿಲ್ಲ. ನಮ್ಮ ಬೇಡಿಕೆ ಈಡೇರುವರೆಗೆ ಕರ್ತವ್ಯಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಕೆಲ ಶಾಲೆಗಳು ಇಂದು ಪರೀಕ್ಷೆ ಏರ್ಪಡಿಸಿದ್ದನ್ನು ಮುಷ್ಕರದಿಂದ ರಜೆ ಘೋಷಿಸಲಾಯಿತು. ಪಟ್ಟಣದಲ್ಲಿ ವ್ಯಾಪಾರ ವಹಿವಾಟ ಮಂದಗತಿಯಲ್ಲಿ ಇತ್ತು. ಸರಕಾರಿ ಕಚೇರಿಗಳಿಗೆ, ಬ್ಯಾಂಕುಗಳಿಗೆ ಪರ ಊರಿನಿಂದ ಬರುವ ನೌಕರರು ಮುಷ್ಕರದಿಂದ ತೊಂದರೆ ಅನುಭವಿಸಿದರು.ಜನಾಕ್ರೋಶ-ಕೋರೊನಾದಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು, ಸಾರಿಗೆ ನೌಕರರು ಮುಷ್ಕರದಿಂದ ಬಡ, ಮಧ್ಯಮ ಜನತೆಗೆ ಹೆಚ್ಚಿನ ತೊಂದರೆಯಾಗುತ್ತಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದನೆ ನೀಡಿ, ಸಾರಿಗೆ ನಷ್ಟವನ್ನು ಮುಷ್ಕರಕ್ಕೆ ಪ್ರಚೋದಿಸುವವರಿಂದ ಭರಿಸುವ ಕಾನೂನು ಜಾರಿಗೆ ತರುವಂತಾಗಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.