ಮನರಂಜನೆ

‘ಮುಖವಾಡ ಇಲ್ಲದವನು 84’ ಟ್ರೇಲರ್​ ಬಿಡುಗಡೆ

‘ಮುಖವಾಡ ಇಲ್ಲದವನು 84’ ಟ್ರೇಲರ್​ ಬಿಡುಗಡೆ

ಬೆಂಗಳೂರು, ನವೆಂಬರ್ 03:  ಓಂ ನಮಃ ಶಿವಾಯ ಮೂವೀಸ್​ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ನಿರ್ಮಾಣದಲ್ಲಿ ಸಿದ್ಧವಾಗಿರುವ  ‘ಮುಖವಾಡ ಇಲ್ಲದವನು 84’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

 

ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸುವ ಈ ಚಿತ್ರದ ಟ್ರೇಲರ್​ ಲಾಂಚ್​ ಬಿಡುಗಡೆ ಕಾರ್ಯಕ್ರಮಕ್ಕೆ ನಿರ್ದೇಶಕ ರವಿ ಶ್ರೀವತ್ಸ ಮತ್ತು ವೇಣುಗೋಪಾಲ್​ ಅತಿಥಿಯಾಗಿ ಆಗಮಿಸಿದ್ದರು. 

 ಗಣಪತಿ ಪಾಟೀಲ್​ ಬೆಳಗಾವಿಯವರು ‘ಮುಖವಾಡ ಇಲ್ಲದವನು 84’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವೃತ್ತಿಯಲ್ಲಿ ಮೆಡಿಕಲ್​ ಕೆಲಸದಲ್ಲಿದ್ದು, ದೂರದ ನ್ಯೂಜಿಲೆಂಡ್​ನಲ್ಲಿ ವಾಸವಾಗಿರುವ ಗಣಪತಿ,  ತುಂಬ ವರ್ಷಗಳಿಂದಲೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದೆನಿಸಿದಾಗ ‘ಮುಖವಾಡ ಇಲ್ಲದವನು 84’ ಚಿತ್ರದ ಮೂಲಕ ಆಗಮಿಸಿದ್ದಾರೆ. ಇದೀಗ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಇಡೀ ತಂಡ, ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

 ಈ ವೇಳೆ ರವಿ ಶ್ರೀವತ್ಸ ಮಾತನಡಿ, ‘ಕಳೆದ ಎರಡು ವರ್ಷಗಳ ಹಿಂದೆ ಸಿನಿಮೋತ್ಸವದಲ್ಲಿ ನಿರ್ಮಾಪಕರು ನನಗೆ ಪರಿಚಯ. ಆಗಿನಿಂದ ಅವರಲ್ಲಿ ಸಿನಿಮಾ ಬಗ್ಗೆ ಅಪಾರ ಹಸಿವು ಮತ್ತು ತುಡಿತ ಇದೆ. ಸಿನಿಮಾ ಮಾಡುತ್ತಿರುವ ಬಗ್ಗೆಯೂ ಅವರು ಹೇಳಿಕೊಂಡಿದ್ದರು. ಅದರಂತೆ ಇದೀಗ ಚಿತ್ರ ಸಿದ್ಧವಾಗಿದೆ. ಚಿತ್ರಮಂದಿರಗಳೂ ಹಸಿದು ಕುಳಿತಿವೆ. ಬೇಗ ಚಿತ್ರಮಂದಿರಕ್ಕೆ ಬನ್ನಿ ಎಂದು ತಂಡಕ್ಕೆ ಹಾರೈಸಿದರು.

 

 ಶಿವಕುಮಾರ್ ಕಡೂರು ನಿರ್ದೇಶನದ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ನಟಿಸಿದ್ದಾರೆ. ಈ ಮೊದಲು ಡ್ರೆಸ್​ ಕೋಡ್​ ಚಿತ್ರ ಮಾಡಿದ ಅನುಭವ ಅವರಿಗಿದೆ. ‘ನಾಲ್ಕು ವರ್ಷ ಸಾಧುಗಳ ಸಂಗ ಮಾಡಿ ಆಧ್ಯಾತ್ಮ, ವೈರಾಗ್ಯದ ಮೊರೆ ಹೋಗಿದ್ದೆ. ಆ ವೇಳೆಯಲ್ಲಿ ಅವರಿಂದ ಕಲಿತಿದ್ದ ವಿಚಾರಗಳಿಂದ ಪ್ರೇರಿತನಾಗಿ ಮುಖವಾಡ ಇಲ್ಲದವನು ಎಂಬ ಪುಸ್ತಕವನ್ನೂ ಬರೆದಿದ್ದೆ. ಇದೀಗ ಸಿನಿಮಾ ಮಾಡಿದ್ದೇನೆ. ಸುವರ್ಣಮುಖಿ, ಬನ್ನೇರುಘಟ್ಟ, ಚಿಕ್ಕಮಗಳೂರು, ಬೆಳಗಾವಿ, ಅಂಬೂಲಿ ಸೇರಿ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ’ ಎಂದರು. 

 ಕಾವ್ಯಾ ಗೌಡ, ರಚನಾ, ಸೊನಾಲಿ ರಾಯ್​ ಮತ್ತು ಹರೀಶ್​ ಸಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ದುರ್ಗಾ ಪ್ರಸಾದ್​ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ, ಕಥೆ, ಚಿತ್ರಕತೆ ಸಂಭಾಷಣೆ ಮತ್ತು ನಿರ್ದೇಶನವನ್ನು ಶಿವಕುಮಾರ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಈ ಸಿನಿಮಾ ಡಿಸೆಂಬರ್​ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 

ಸುದ್ದಿ ಓದಿ