ಕಂದಕಗಳು ತುಂಬಿ ರಸ್ತೆ ಮೇಲೆ ನಿಂತ ನೀರು, ಬೆಳೆ ಹಾನಿ
ಮುಂಡಗೋಡ 23: ಪಟ್ಟಣದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಯಲ್ಲಾಪುರ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ತೋಡಿದ ಕಂದಕಗಳು ತುಂಬಿ ಹೆಚ್ಚುವರಿ ನೀರು ರಸ್ತೆಯ ಮೇಲೆ ಹರಿದು ಬಂದು ನಿಂತು ವಾಹನ ಚಾಲಕರು, ಬೈಕ್ ಸವಾರರು ಹಿಡಿಶಾಪ ಹಾಕುತ್ತಿರುವುದು ಕಂಡು ಬಂದರೆ ಪಕ್ಕದ ಹೊಲ-ಗದ್ದೆಗಳಲ್ಲಿ ನೀರು ಹೊಕ್ಕು ಬೆಳೆ ಹಾನಿಯಾಗುತ್ತಿರುವ ದೃಶ್ಯ ರವಿವಾರ ಕಂಡು ಬಂತು.
ಇಲ್ಲಿನ ಸಣ್ಣ ನೀರಾವರಿ ಇಲಾಖೆಯವರು ಅಮ್ಮಾಜಿ ಕೆರೆಯಿಂದ ಹೆಚ್ಚುವರಿಯಾದ ನೀರು ಹರಿದು ಹೋಗಲು ಯಲ್ಲಾಪುರ ರಸ್ತೆಯ ಪಕ್ಕದಲ್ಲಿಯೇ ಅವೈಜ್ಞಾನಿಕವಾಗಿ ಕಂದಕಗಳನ್ನು ತೋಡಿದ್ದಾರೆ. ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ನೀರು ಮತ್ತು ಕಂದಕಗಳಲ್ಲಿ ತುಂಬಿ ಹೆಚ್ಚಾದ ನೀರು ರಸ್ತೆಯ ಮೇಲೆ ನಿಂತು ಕೆರೆಯಾಗಿ ನಿರ್ಮಿಸಿದೆ. ದಿನ ನಿತ್ಯ ಈ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತವೆ. ಜನರೂ ಹೊಲ-ಗದ್ದೆಗಳಿಗೆ ತಿರುಗಾಡುತ್ತಾರೆ. ಕಂದಕಗಳಿಂದ ತುಂಬಿಕೊಂಡು ಬಂದು ರಸ್ತೆಯ ಮೇಲೆ ನಿಂತ ನೀರು ದಾಟಿ ಹೋಗಲು ಹರಸಾಹಸಪಡಬೇಕಾಗಿದೆ. ಕಳೆದ ವರ್ಷವೂ ಇದೇ ರೀತಿಯಾದ ಸಮಸ್ಯೆಯನ್ನು ಎದುರಿಸಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಪರಶುರಾಮ ರಾಣಿಗೇರ ಹೇಳಿದರು.