ದಸರಾ ರಜೆ ಕಡಿತಗೊಳಿಸಿದ ಲೊಯೋಲಾ ಶಾಲೆ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಮನವಿ
ಮುಂಡಗೋಡ 01 : ಸರ್ಕಾರ ನಿಗದಿಪಡಿಸಿರುವ ದಸರಾ ರಜೆಯನ್ನು ಕಡಿತಗೊಳಿಸಿ, ಕ್ರಿಸ್ಮಸ್ ಹಬ್ಬದ ರಜೆಗೆ ಹೊಂದಿಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರಸಿದ್ಧ ಲೊಯೋಲಾ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗಿದೆ.
ನಾಡಹಬ್ಬದ ಆಚರಣೆಗೆ ಧಕ್ಕೆ ಆರೋಪ: ಅನುದಾನಿತ ಕ್ರೈಸ್ತ ಶಿಕ್ಷಣ ಸಂಸ್ಥೆಯಾಗಿರುವ ಲೊಯೋಲಾದಲ್ಲಿ ವಿವಿಧ ಸಮುದಾಯಗಳ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. "ದಸರಾ ಹಬ್ಬವು ನಮ್ಮ ನಾಡಿನ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ.
ಶಾಲಾ ರಜೆಯನ್ನು ಕಡಿತಗೊಳಿಸುವುದರಿಂದ ಮಕ್ಕಳು ಕುಟುಂಬದೊಂದಿಗೆ ಹಬ್ಬ ಆಚರಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ" ಎಂದು ಮನವಿದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಹೋರಾಟದ ಎಚ್ಚರಿಕೆ: ಸರ್ಕಾರ ನಿಗದಿಪಡಿಸಿದ ಶೈಕ್ಷಣಿಕ ರಜಾ ವೇಳಾಪಟ್ಟಿಯನ್ನು ಏಕಪಕ್ಷೀಯವಾಗಿ ಬದಲಾಯಿಸದಂತೆ ಶಾಲೆಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ದಸರಾ ರಜೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಒಂದು ವೇಳೆ ರಜೆ ಕಡಿತ ನಿರ್ಧಾರ ಮುಂದುವರಿದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ವೇಳೆ ಹಿಂದು ಜಾಗರಣಾ ವೇದಿಕೆ ತಾಲೂಕು ಘಟಕದ ಸಂಚಾಲಕ ಪ್ರಕಾಶ ಬಡಿಗೇರ, ಬಜರಂಗದಳದ ತಾಲೂಕು ಘಟಕದ ಸಂಚಾಲಕ ಶಂಕರ ಲಮಾಣಿ, ಶ್ರೀರಾಮ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಚ್.ಪಿ., ಗೀರೀಶ ಓಣಿಕೇರಿ, ವಿಶ್ವನಾಥ ನಾಯರ ಹಾಗೂ ಉಪಸ್ಥಿತರಿದ್ದರು.