ಮೂರು ಬಾರಿ ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕ ವಿಜೇತ ನೀರಜ್ ಯಾದವ್ 42ನೇ ವಯಸ್ಸಿನಲ್ಲಿ ನಿಧನ
ನವದೆಹಲಿ, ಅ. 28 : ಮೂರು ಬಾರಿ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಖ್ಯಾತ ಪ್ಯಾರಾ ಅಥ್ಲೀಟ್ ನೀರಜ್ ಯಾದವ್ (42) ಹರಿಯಾಣದ ಸೋನಿಪತ್ನಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅವರನ್ನು ತಕ್ಷಣ ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬುಧವಾರ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿತ್ತು. ಅವರ ಸಾವಿನ ಹಿಂದಿನ ನಿಖರ ಕಾರಣಗಳು ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.
ಎಫ್-55 ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ನೀರಜ್ ಯಾದವ್ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಒಟ್ಟು ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. 2018ರಲ್ಲಿ ಜಕಾರ್ತದಲ್ಲಿ ನಡೆದ ಕ್ರೀಡಾಕೂಟದಲ್ಲಿ ಒಂದು ಚಿನ್ನ ಹಾಗೂ 2023ರಲ್ಲಿ ಹ್ಯಾಂಗ್ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು.
ನೀರಜ್ ಯಾದವ್ ಅವರು ಪತ್ನಿ ಹಾಗೂ ಮೂರು ವರ್ಷದ ಮಗಳನ್ನು ಅಗಲಿದ್ದಾರೆ. ಅವರ ಸಾವಿನ ಸುದ್ದಿ ತಿಳಿದ ಬಳಿಕ ಪ್ಯಾರಾಲಿಂಪಿಕ್ ಚಾಂಪಿಯನ್ ಸುಮಿತ್ ಅಂತಿಲ್ ಮತ್ತು ಜಾವೆಲಿನ್ ಎಸೆತಗಾರ ವಿಪಿನ್ ಕಸ್ಸಾನಾ ಅವರು ಕುಟುಂಬದವರೊಂದಿಗೆ ಇದ್ದರು.
ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ತಂಡದ ಮುಖ್ಯ ಕೋಚ್ ಎಸ್. ಸತ್ಯನಾರಾಯಣ ಅವರು ನೀರಜ್ ಯಾದವ್ ಅವರ ನಿಧನವನ್ನು ದೃಢಪಡಿಸಿದ್ದು, ಈ ಘಟನೆ ಅತ್ಯಂತ ದುಃಖಕರ ಎಂದು ಹೇಳಿದ್ದಾರೆ.
"ನೀರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ಆಘಾತಕಾರಿ ಮತ್ತು ದುಃಖಕರ ಘಟನೆ" ಎಂದು ಸತ್ಯನಾರಾಯಣ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ಐಚಿ-ನಗೋಯಾದಲ್ಲಿ ನಡೆದ ಇತ್ತೀಚಿನ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಡೋಪಿಂಗ್ ಅಮಾನತಿನ ಕಾರಣದಿಂದ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೀರಜ್ ಯಾದವ್ ಅವರು ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.
ಆದರೆ, ಘಟನೆಯ ಹಿಂದಿನ ಕಾರಣಗಳ ಬಗ್ಗೆ ಊಹಾಪೋಹ ಮಾಡುವುದು ಸರಿಯಲ್ಲ ಎಂದು ಸತ್ಯನಾರಾಯಣ ಹೇಳಿದ್ದಾರೆ. ಐಚಿ-ನಗೋಯಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸೆ ಯಾವುದೇ ಕ್ರೀಡಾಪಟುವಿಗೆ ಸಹಜವಾಗಿರುತ್ತದೆ. ನೀರಜ್ ಅವರಿಗೂ ಸ್ಪರ್ಧಿಸುವ ಬಯಕೆ ಇದ್ದಿರಬಹುದು. ಆದರೆ, ಅವರ ಅಮಾನತು ಅವಧಿ ಮುಗಿಯದ ಕಾರಣ ಸ್ಪರ್ಧಿಸಲು ಅರ್ಹರಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
2023ರಲ್ಲಿ ನಿಷೇಧಿತ ಅನಾಬೊಲಿಕ್ ಸ್ಟೆರಾಯ್ಡ್ 'ಸ್ಟಾನೊಜೊಲೋಲ್' ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ನೀರಜ್ ಯಾದವ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಈ ಔಷಧವು ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯ (ವಾಡಾ) ನಿಯಮಗಳ ಪ್ರಕಾರ ನಿಷೇಧಿತ ವಸ್ತುವಾಗಿದೆ.
ಈ ಹಿನ್ನಡೆಯ ನಡುವೆಯೂ ನೀರಜ್ ಯಾದವ್ ಭಾರತದ ಸಾಧಕ ಪ್ಯಾರಾ ಅಥ್ಲೀಟ್ಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ಏಳು ವರ್ಷದ ವಯಸ್ಸಿನಲ್ಲಿ ಪೋಲಿಯೊ ನಂತರದ ಶಾಶ್ವತ ಪಾರ್ಶ್ವವಾಯು ಸಮಸ್ಯೆ (Post-Polio Residual Paralysis) ಇರುವುದು ಪತ್ತೆಯಾಗಿತ್ತು. ಆರಂಭದಲ್ಲಿ ವೀಲ್ಚೇರ್ ಟೆನಿಸ್ನಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಪ್ಯಾರಾ ಅಥ್ಲೆಟಿಕ್ಸ್ಗೆ ಬದಲಾದರು.
ಎಫ್-55 ವಿಭಾಗದಲ್ಲಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ಅವರು, ಶಾಟ್ಪುಟ್, ಡಿಸ್ಕಸ್ ಮತ್ತು ಜಾವೆಲಿನ್ನಂತಹ ಕುಳಿತುಕೊಂಡು ಸ್ಪರ್ಧಿಸುವ ಎಸೆತದ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.