ನಟ ಸೂರ್ಯಗೆ ಬೆದರಿಕೆ.. ಸಶಸ್ತ್ರ ಪೊಲೀಸರ ಭದ್ರತೆ
ಚೆನ್ನೈ, ನ 17: ತಮಿಳು ನಾಯಕ ನಟ ಸೂರ್ಯ ಅಭಿನಯದ ಹೊಸ ಚಿತ್ರ ‘ಜೈ ಭೀಮ್’ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ವಣ್ಣಿಯಾರ್ ಸಮುದಾಯದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಆರೋಪಿಸಿ ಚಿತ್ರ ನಿರ್ಮಾಪಕರಾದ ಸೂರ್ಯ, ಜ್ಯೋತಿಕಾ, ನಿರ್ದೇಶಕ ಟಿ ಜೆ ಜ್ಞಾನವೇಲ್, ಅಮೆಜಾನ್ ಪ್ರೈಮ್ ವೀಡಿಯೋಗಳಿಗೆ ವಣ್ಣಿಯಾರ್ ಸಂಘ ನವಂಬರ್ 15ರಂದು ಲೀಗಲ್ ನೋಟಿಸ್ ಕಳುಹಿಸಿದೆ.
ಇದರ ಬೆನ್ನಲ್ಲೇ ಜೈ ಭೀಮ್ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಸೂರ್ಯ ಅವರಿಗೆ ಹಲವು ಜೀವ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ನಟ ಸೂರ್ಯ ನಿವಾಸದ ಬಳಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ, ಟಿ ನಗರದಲ್ಲಿರುವ ಸೂರ್ಯ ಅವರ ನಿವಾಸದ ಹೊರಗೆ ಐವರು ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.
ವಣ್ಣಿಯಾರ್ ಸಮುದಾಯಕ್ಕೆ ಸೂರ್ಯ ಅವರ ತಂಡ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಪರಿಹಾರವಾಗಿ 5 ಕೋಟಿ ರೂ ನೀಡಬೇಕು ಎಂದು ಆಗ್ರಹಿಸಿದೆ. ನೋಟಿಸ್ ನಂತರ ವಣ್ಣಿಯಾರ್ ಸಮುದಾಯದ ನಾಯಕರು ಸೂರ್ಯ ಅವರಿಗೆ ಬಹಿರಂಗ ಬೆದರಿಕೆ ಹಾಕಿದ್ದರು. ಸೂರ್ಯ ಅವರ ಮೇಲೆ ದಾಳಿ ನಡೆಸಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಗಪಟ್ಟಣಂ ಜಿಲ್ಲಾ ಕಾರ್ಯದರ್ಶಿ ಸೀತಮಲ್ಲಿ ಪಜನಿ ಸಾಮಿ ಅವರು ಘೋಷಿಸಿದ್ದಾರೆ. ಜೈ ಭೀಮ್ ಚಿತ್ರವನ್ನು ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ. ಸೂರ್ಯ, ಜ್ಯೋತಿಕಾ ಅವರ ನಿರ್ಮಾಣ ಸಂಸ್ಥೆಯಾದ 2 ಡಿ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.
ಇರುಲಾರ್ ಸಮುದಾಯದ ಸದಸ್ಯರಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡುವ ದೃಶ್ಯಗಳು ಚಿತ್ರದಲ್ಲಿದೆ. ಚಿತ್ರದಲ್ಲಿ ಸೂರ್ಯ, ಮಣಿಕಂದನ್ ಹಾಗೂ ಲಿಜೋಮೋಲ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಪ್ರಸ್ತುತ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ.