ಹೊಸಪೇಟೆ

ಶರತ್ ಚಂದ್ರ ಚಟರ್ಜಿ ಚಿಂತನೆಗಳು ಮಾರ್ಗದರ್ಶಕ: ಜಾನೇಕಲ್

ಶರತ್ ಚಂದ್ರ ಚಟರ್ಜಿ ಚಿಂತನೆಗಳು ಮಾರ್ಗದರ್ಶಕ: ಜಾನೇಕಲ್

ಹೊಸಪೇಟೆ 16: ಬರಹ ಮತ್ತು ಬದುಕನ್ನು ಸಮ್ಮಿಳನಗೊಳಿಸಿಕೊಂಡ ಸಾಹಿತಿಗಳು ಅಪರೂಪ. ಶರತ್ ಚಂದ್ರ ಚಟರ್ಜಿ ಅವರು ತಮ್ಮ ಕಾಲದಲ್ಲಿ ಜಡಗೊಂಡಿದ್ದ ಮೌಲ್ಯಗಳನ್ನು ಟೀಕಿಸಿ ಪರ್ಯಾಯ ಪ್ರಜಾತಾಂತ್ರಿಕ ಹಾಗೂ ಅದಕ್ಕಿಂತಲೂ ಉನ್ನತವಾದ ಸಮಾಜವಾದಿ ಮೌಲ್ಯಗಳನ್ನು ನೀಡುವಲ್ಲಿ ಯಶಸ್ವಿಯಾದರು ಎಂದು ಎಐಡಿವೈಓ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು.  

ದಿ. 16ರಂದು ಸ್ವತಂತ್ರ ಹೋರಾಟಗಾರ ಹಾಗೂ ಮಹಾನ್ ಸಾಹಿತಿ ಶರತ್‌ಚಂದ್ರ ಚಟರ್ಜಿ ಅವರ 148ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಆರಂಭಿಕ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸಿ ಟೀಕಿಸುತ್ತಾ ಉನ್ನತ ಮಟ್ಟದ ಮೌಲ್ಯಗಳನ್ನು ಹಾಗೂ ಶ್ರೇಷ್ಠ ಚಿಂತನೆಯ ಸಮಾಜವನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದರು. ಬ್ರಿಟಿಷ್ ಆಳ್ವಿಕೆ ಇವರ ಅಧಿಕಾರ ಕಾದಂಬರಿಯ ಚಿಂತನೆಗಳಿಂದ ಆತಂಕಕ್ಕೆ ಒಳಗಾಗಿ ನಿಷೇಧ ಹೇರಿತ್ತು. ಆದರೆ ಭಾರತದ ಯುವಕರು ಅದೆಷ್ಟು ಓದಿದರು ಎಂದರೆ ಆ ಕಾಲದಲ್ಲಿ ತಕ್ಷಣವೇ ಸಾವಿರಾರು ಕೃತಿಗಳು ಮಾರಾಟವಾಗಿದ್ದವು. ಇಂತಹ ಮಹಾನ್ ಚೇತನಗಳ ಚಿಂತನೆಗಳು ನಮಗೆ ಮಾರ್ಗದರ್ಶಕ ಆಗಬೇಕಿದೆ ಎಂದರು. 

ಪಂಪಾಪತಿ ಎಐಡಿವೈಓ ಕಾರ್ಯದರ್ಶಿ ಮಾತನಾಡಿ ವಿದ್ಯಾರ್ಥಿ ಯುವಕರು ಹಾಗೂ ಮಹಿಳೆಯರು ತಮ್ಮ ಸುತ್ತಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದರಿಂದ ಹೊರಬರಲು ಶ್ರೇಷ್ಠ ಸಾಹಿತ್ಯ ದಾರಿ ದೀಪ. ಶರತ್ ಚಂದ್ರ ಚಟರ್ಜಿ ಅವರ ಸಾಹಿತ್ಯ ಹೊಸ ಕ್ರಾಂತಿಕಾರಿ ಎಚ್ಚರವನ್ನು ಯುವಕರಿಗೆ ಹಾಗೂ ಮಹಿಳೆಯರಿಗೆ ತುಂಬಿರುವುದು ಚರಿತ್ರಾರ್ಹ ಸಂಗತಿ ಎಂದರು. 

ಎಐಡಿವೈಓ ಉಪಾಧ್ಯಕ್ಷ ಎರ್ರಿಸ್ವಾಮಿ ಮಾತನಾಡುತ್ತಾ ಸಾಹಿತಿಗಳು, ಚಿಂತಕರು, ಒಂದು ಸ್ವಾಸ್ಥ್ಯ ಸಮಾಜದ ವೈದ್ಯರು ಇದ್ದಂತೆ. ಜಾತಿ, ಧರ್ಮ, ಲೈಂಗಿಕ ದೌರ್ಜನ್ಯ, ಹಿಂಸೆಯ ಕಾಲದಲ್ಲಿ ಸಾಹಿತಿಗಳು ಅಮೂಲಾಗ್ರ ಸಮಾಜದ ಬದಲಾವಣೆಗೆ ಶ್ರಮಿಸಬೇಕಾದ ಜವಾಬ್ದಾರಿ ಇದೆ ಎಂದರು. 

ಪಾಲಾಕ್ಷ ಹಡಗಲಿ ಪ್ರಾರ್ಥನಾ ಗೀತೆ ಹಾಡಿದರು. ಚನ್ನಬಸವ ಜಾನೇಕಲ್ ಪುಷ್ಪ ಅರ್ಚನೆ ಮಾಡಿದರು. ಪ್ರಕಾಶ್, ಅಭಿಷೇಕ್, ಅಜ್ಜಯ್ಯ, ಸಮೀರ್, ಶಿವು ಬಡಿಗೇರ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ