ಸೌಂದತ್ತಿ

ಈ ಬಾರಿ ಬೆಳಗಾವಿಯ 18 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ

ಈ ಬಾರಿ ಬೆಳಗಾವಿಯ 18 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ: ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ  

ಸವದತ್ತಿ 06: ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು 2024ರಲ್ಲಿ ಉದ್ಘಾಟನೆಗೊಳಿಸಲಾಗುತ್ತಿದ್ದು, ಈಗಲೆ ಟಿಕೆಟ್ ರಿಸರವೇಶನ್ ಮಾಡಿಟ್ಟುಕೊಳ್ಳಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.    

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರಾರ್ಥ ಹಮ್ಮಿಕೊಂಡ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಳಗಾವಿಯಲ್ಲಿರುವ 18 ಮತಕ್ಷೇತ್ರಗಳಲ್ಲಿ ಕಳೆದ ಬಾರಿ 11 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವನ್ನು ಜನತೆ ಗೆಲ್ಲಿಸಿಕೊಟ್ಟಿದ್ದು, ಈ ಬಾರಿ ಬೆಳಗಾವಿಯ 18 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.  ಮೇ.13ರಂದು ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಸರಕಾರ ರಚನೆಯಾಗಲಿದೆ ಎಂದರು. 

ಎರಡು ಗಂಟೆ ತಡವಾಗಿ ಆಗಮಿಸಿದ ಅಮಿತ್ ಶಾ ನೇರವಾಗಿ ವೇದಿಕೆಯ ಮೇಲೆ ಹೋಗಿ ಭಾಷಣ ಆರಂಭಿಸಿ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆಯಾಚಿಸಿದರು. 2024ರಲ್ಲಿ ಬಜರಂಗದಳ ನಿಷೇಧ ಮಾಡೋ ಮಾತನ್ನು ಆಡುತ್ತಿರುವ ಕಾಂಗ್ರೆಸ್ ಪಕ್ಷ ಅದರ ಪರಿಣಾಮ ಎದುರಿಸಲಿದೆ. ದೇಶ ವಿರೋಧಿ ಕೆಲಸ ಮಾಡುವವರಿಗೆ ಜೈಲಿನ ಕಂಬಿಯ ಹಿಂದೆ ಕಳಿಸಲಾಗುವದು ಎಂದರು.  

ಬಸವಣ್ಣನವರ ಸಿದ್ಧಾಂತದ ಮೇಲೆ ಕೆಲಸ ಮಾಡುವವರಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದ್ದು, ಭ್ರಷ್ಟಾಚಾರವನ್ನು ಒಂದು ಸಮುದಾಯಕ್ಕೆ ಹೋಲಿಸುವುದು ಎಷ್ಟು ಸರಿ ಎಂದರು. ಅಂದು ಇಂದಿರಾ ಗಾಂಧಿಯವರು ನಿಜಲಿಂಗಪ್ಪನವರಿಗೆ ಹಾಗೂ ರಾಜೀವ ಗಾಂಧಿಯವರು ವೀರೇಂದ್ರ ಪಾಟೀಲರಿಗೆ ಅಪಮಾನ ಮಾಡಿಕೊಂಡು ಬಂದಿದ್ದು, ಆದರೆ ಬಿಜೆಪಿ ಸರಕಾರ ಯಡಿಯೂರ​‍್ಪ ಮತ್ತು ಬೊಮ್ಮಾಯಿಯವರನ್ನು ಸಿಎಮ್ ಮಾಡುವ ಮೂಲಕ ಲಿಂಗಾಯತರಿಗೆ ಸನ್ಮಾನ ಮಾಡೋ ಕೆಲಸ ಮಾಡಿದೆ ಎಂದರು.  

ಎರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರವರಾಗಿದ್ದು, ಅವರಿಗೆ ಅಪಮಾನ ಮಾಡುವ ಕಾಂಗ್ರೆಸ್ ಪಕ್ಷದ ರಾಹುಲ್ ಬಾಬಾ ನೀವು 10 ಜನ್ಮ ಜೀವಂತ ಇದ್ದರೂ ಸಾವರ್ಕರರಂತಹ ಬಲಿದಾನ ನೋಡೋಕ್ಕಾಗುವದಿಲ್ಲ ಎಂದರು. 

ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರಕಾರಗಳು ಅನೇಕ ಜನಪರವಾದಂತ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಂದು ರೈತ ಸಮ್ಮಾನ ಯೋಜನೆಗೆ ರೈತರ ಪಟ್ಟಿ ಕೊಡುವಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಹಿಂದೇಟು ಹಾಕಿರುವದನ್ನು ಗಮನಿಸಬೇಕಿದೆ ಎಂದರು. ಬರುವಂತ ಮೂರು ವರ್ಷಗಳಲ್ಲಿ ರೈತರಿಗೆ ಪ್ರತಿ ವರ್ಷ ಮೂರು ಬೆಳೆಗಳನ್ನು ತೆಗೆಯುವಷ್ಟು ನೀರು ಕೊಡಲಾಗುವುದು ಎಂದರು. ಉತ್ತರ ಕರ್ನಾಟಕದ ರೈತರೊಂದಿಗೆ ಪ್ರಧಾನ ನರೇಂದ್ರ ಮೋದಿ ಬೆಟ್ಟದಂತೆ ನಿಂತಿದ್ದು, ಅಭಿವೃದ್ದಿಪರವಾಗಿರುವಂತ ವಿಶೇಷ ಯೋಜನೆಗಳನ್ನು ಉತ್ತರ ಕರ್ನಾಟಕಕ್ಕೆ ನೀಡಲಾಗುತ್ತಿದೆ ಎಂದರು. 

ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಬಂದಾಗ ಮಾತ್ರ ಮರಾಠರ ನೆನಪು ಆಗುತ್ತಿದ್ದು, ಬಿಜೆಪಿ ಸರಕಾರವು ಮರಾಠ ಸಮಾಜಕ್ಕೆ ಅಭಿವೃದ್ದಿ ಪ್ರಾಧಿಕಾರವನ್ನು ಮಾಡುವ ಮೂಲಕ ಸಮಾಜದ ಜನರ ಕಾಳಜಿಯನ್ನು ಬಯಸಿದೆ ಎಂದರು. 

ಸಂವಿಧಾನ ಬಾಹಿರವಾಗಿ ಮುಸ್ಲಿಂರಿಗೆ ಶೇ.4 ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷ ನೀಡಿರುವದನ್ನು ತೆಗೆದು ಹಾಕಿ ಆ ಮೀಸಲಾತಿಯನ್ನು ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ನೀಡಿರುವುದು ಬಿಜೆಪಿ ಸರಕಾರ ಎಂದರು. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ಮಾಡುತ್ತಿದ್ದು, ಕಾಂಗ್ರೆಸ್ ನಾಯಕರೆ ಕಿವಿಯೊಡ್ಡಿ ಕೇಳಿ ಈ ಚುನಾವಣೆಯಲ್ಲಿ ನಿಮ್ಮ ಸರಕಾರ ಬರೋದಿಲ್ಲ ಎಂದರು. ಮೀಸಲಾತಿಯನ್ನು ತೆಗೆದು ಹಾಕುತ್ತೀರಿ ಎಂದು ಹೇಳುತ್ತಿದ್ದು, ನೀವು ಅಧಿಕಾರಕ್ಕೆ ಬರಲ್ಲ ಅಂದ ಮೇಲೆ ಮೀಸಲಾತಿ ತೆಗೆದು ಹಾಕಲು ಹೇಗೆ ಸಾಧ್ಯ ಎಂದರು.  

ಬಿಜೆಪಿ ಪ್ರಣಾಳಿಕೆಯಲ್ಲಿ ಗಣೇಶ ಚತುರ್ಥಿ, ಯುಗಾದಿ, ದೀಪಾವಳಿಗೆ ಮೂರು ಉಚಿತ ಸಿಲಿಂಡರ್ ನೀಡೋದಾಗಿ ಘೋಷಣೆ ಮಾಡಲಾಗಿದೆ ಎಂದರು. ಸಮಾನ ನಾಗರೀಕ ಹಕ್ಕು ತರುವ ಭರವಸೆ ಬಿಜೆಪಿ ನೀಡುತ್ತಿದೆ. ಕಿತ್ತೂರು ಕರ್ನಾಟಕ ಅಭಿವೃದ್ದಿ ಪ್ರಾಧಿಕಾರ ರಚನೆ ಹಾಗೂ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿದೆ ಎಂದರು. 

ಈ ಬಾರಿ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಿಂದ ಸಹೋದರಿ ರತ್ನಾ ಮಾಮನಿಯವರನ್ನು ಆಯ್ಕೆ ಮಾಡಿ ಕಳಿಸಬೇಕೆಂದರು. 

ಬಿಜೆಪಿ ಅಭ್ಯರ್ಥಿ ರತ್ನಾ ಆನಂದ ಮಾಮನಿ ಅಮಿತ್ ಶಾ ತೆರಳಿದ ನಂತರ ಮಾತನಾಡಿ, ತಮಗೆ ರಾಜಕಾರಣದಲ್ಲಿ ಎದುರಾದ ಕಷ್ಟಗಳನ್ನು ನೆನೆದು ಕಣ್ಣೀರು ಹಾಕಿದರು. ನನಗೆ ಕಷ್ಟಗಳನ್ನು ತಂದವರಿಗೆ ಮೇ.13ಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದ ಅವರು, ಯಾರೋ ಒಬ್ಬರು ಎಲ್ಲೋ ಕುಳಿತು ರಾಜಕೀಯ ಮಾಡಿದರೆ ಆಗೋಲ್ಲ. ಬೇರೆ ತಾಲೂಕಿನವರು ಇಲ್ಲಿ ಬಂದು ರಾಜಕೀಯ ಮಾಡೋಕೆ ಬಿಡೊಲ್ಲ ಎಂದು ಪರೋಕ್ಷವಾಗಿ ಸತೀಶ ಜಾರಕಿಹೊಳಿಯವರಿಗೆ ಟಾಂಗ್ ಕೊಟ್ಟರು. 

ನಾಮಪತ್ರ ಸಲ್ಲಿಕೆ ವೇಳೆ ನನಗೆ ಆಗಿರುವ ಕಷ್ಟ ಅಷ್ಟಿಷ್ಟಲ್ಲ. ಒಬ್ಬ ಹೆಣ್ಣು ಮಗಳ ಮೇಲೆ ಪೌರುಷ ತೋರುತ್ತಿದ್ದಾರೆ. ಹುಲಿಯಂತ ನಮ್ಮ ಯಜಮಾನರು ಇದ್ದಾಗ ತಮ್ಮ ಪೌರುಷ ತೋರಿಸಬೇಕಿತ್ತು ಎಂದರು. 

ಕೇಂದ್ರ ಸಚಿವ ಕಪೀಲ ಪಾಟೀಲ, ಸಂಜಯ ಪಾಟೀಲ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಸಯ್ಯ ಹಿರೇಮಠ, ವಿರುಪಾಕ್ಷ ಮಾಮನಿ, ಗಂಗಮ್ಮತಾಯಿ ಮಾಮನಿ, ಬಿ.ವಿ.ಮಲಗೌಡರ, ಶಿವಾನಂದ ಹೂಗಾರ, ಬಸವರಾಜ ಪಟ್ಟಣಶೆಟ್ಟಿ, ಸಂಜೀವ ನವಲಗುಂದ, ರುದ್ರಣ್ಣ ಚಂದರಗಿ, ಅಜಿತಕುಮಾರ ದೇಸಾಯಿ, ವಿನಯಕುಮಾರ ದೇಸಾಯಿ, ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಜಗದೀಶ ಹನಸಿ, ಎಫ್‌.ಎಸ್‌.ಸಿದ್ದನಗೌಡರ, ಈರಣ್ಣ ಚಂದರಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ