ತಾಕ್ಕತ್ತಿದ್ದರೆ ನನ್ನೊಂದಿಗೆ ನೇರವಾಗಿ ಯುದ್ಧ ಮಾಡು ಎನ್ನುತ್ತಲೇ ಹೆಡೆಮುರಿ ಕಟ್ಟಿದ ಗಟ್ಟಿಗಿತ್ತಿ ಇವಳು...! ಇತಿಹಾಸದ ಅದೆಷ್ಟೋ ಕರಾಳ ಸತ್ಯಗಳು ಇಂದಿಗೂ ನಮಗೆ ಗೋತ್ತೇ ಇಲ್ಲದಂತೆ ಹೋಗುತ್ತಿವೆ ಅಲ್ಲವೇ?
ಲೋಕದರ್ಶನ ವರದಿ
ನನಗೆ ಎಷ್ಟೋ ಬಾರಿ ಇತಿಹಾಸವನ್ನು ತಿಳಿಸಿಕೊಡುವ ಕೋಟೆ ಕೊತ್ತಲುಗಳಿಗೆ, ಯುದ್ಧಭೂಮಿಗಳಿಗೆ ಬಾಯಿ ಇರಬೇಕಿತ್ತು ಎಂದೆನಿಸುತ್ತದೆ. ರಾಜ ಮಹಾರಾಜರುಗಳ ಹೋರಾಟಕ್ಕೆ, ರಾಣಿ ಮಹಾರಾಣಿಯರ ರಾಜ್ಯಭಾರಕ್ಕೆ, ಮಂತ್ರಿ ಕಂತ್ರಿಗಳ ಕುತಂತ್ರಕ್ಕೆ, ಲೋಭ ಆಶೆಗಳ ಮೋಸಕ್ಕೆ ಇವುಗಳು ಇಂದು ಮೂಕ ಸಾಕ್ಷಿಗಳಾಗಿ ನಿಂತಿವೆ. ಇವುಗಳು ಸಾಕ್ಷಿಗಳಾದರೂ ಸಹ ಸಾಕ್ಷ್ಯ ನುಡಿಯುವುದಿಲ್ಲ ಎನ್ನುವ ಕಾರಣಕ್ಕಾಗಿ ಇಂದು ರಚಿತಗೊಂಡ ಇತಿಹಾಸವು ನೈಜ ಇತಿಹಾವನ್ನು ಮಣ್ಣುಪಾಲು ಮಾಡಿ ಅದರ ಸಮಾಧಿಯ ಮೇಲೆಯೇ ತಮ್ಮಿಷ್ಟದಂತೆ ಇತಿಹಾಸವನ್ನು ನಿರ್ಮಾಣ ಮಾಡಲಾಗಿದೆ ಎನ್ನುವುದಕ್ಕೆ ನಮ್ಮಲ್ಲಿ ಅನೇಕ ಪುರಾವೆಗಳು ಲಭ್ಯವಾಗುತ್ತಿರುವುದು ತಮಗೆಲ್ಲ ಗೊತ್ತೇ ಇದೆ.
ಭಾರತೀಯರು ರಚಿಸಿದ ಇತಿಹಾಸದಲ್ಲಿ ನಮ್ಮ ಶೌರ್ಯಕ್ಕಿಂತಲೂ ನಮ್ಮ ಸೋಲನ್ನೇ ಎತ್ತಿ ತೋರಿಸುವ ಕಾರ್ಯ ಮಾಡಲಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದರಲ್ಲೂ ಪಠ್ಯಗಳಲ್ಲಿ ಮೋಸದಿಂದ ಗೆದ್ದು ಬೀಗಿದವರ ಕುರಿತು ಹೇಳಲಾಗುತ್ತಿದೆಯೇ ಹೊರತು ದಂಡೆತ್ತಿ ಬಂದವರ ಬೆಂಡೆತ್ತಿ ಕಳುಹಿಸಿದ ರಾಜರುಗಳ ಕುರಿತಾಗಲಿ, ರಾಜರುಗಳು ಇಲ್ಲದ ಸಂದರ್ಭದಲ್ಲಿ ಕತ್ತಿ ಹಿಡಿದು ಸೆಣೆಸಿದ ರಾಣಿಯರುಗಳ ಕುರಿತಾಗಲಿ ಹೇಳುವುದರಲ್ಲಿ ಯಾಕೋ ಚೌಕಾಸಿಗೆ ಇಳಿದು ಅವರನ್ನು ಮೂಲೆ ಗುಂಪು ಮಾಡಲಾಗಿದ್ದು ಸತ್ಯವೇ ಇಲ್ಲವೆ? ಹೀಗಾಗಿಯೇ ನಮ್ಮ ಮಕ್ಕಳಲ್ಲಿ ದೇಶಪ್ರೇಮಕ್ಕಿಂತ ನಮ್ಮ ದೇಶದ ಬಗ್ಗೆ ವಿಲಕ್ಷಣ ಭಾವ ಮೂಡುತ್ತಿದೆ.
ಭಾರತದ ಮೇಲೆ ಹದಿನೇಳು ಬಾರಿ ದಾಳಿ ಮಾಡಿದ ಮಹ್ಮದ್ ಘೋರಿ ಕುರಿತು ವಿಜೃಂಭಿಸಿ ತಿಳಿಸುವ ಇತಿಹಾಸ ಅದಕ್ಕೂ ಮೊದಲು ಹದಿನಾರು ಬಾರಿ ಸೋತು ಸುಣ್ಣವಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಹದಿನೇಳನೇ ಬಾರಿ ಆತ ಗೆದ್ದು ಭಾರತದಲ್ಲಿ ತನ್ನ ಆಡಳಿತವನ್ನು ಪ್ರಾರಂಭಿಸಿದ್ದರ ಕುರಿತು ಹೇಳುತ್ತದೆಯೇ ಹೊರತು ಅದು ಹೇಗೆ ಮೋಸ ಮಾಡಿ ದೇಶವನ್ನು ಲೂಟಿ ಮಾಡಿದ ಎನ್ನುವುದರ ಕುರಿತು ಹೇಳುವುದಿಲ್ಲ. ಸೋತ ಪೃಥ್ವಿರಾಜ್ ಚೌಹಾಣರ ಕುರಿತು ವಿಭಿನ್ನವಾಗಿ ಹೇಳುವ ಇತಿಹಾಸ ಆತ ಘೋರಿಯನ್ನು ಅಟ್ಟಾಡಿಸಿಕೊಂಡು ಹುಟ್ಟಡಗಿಸಿದ್ದು ಹೇಳುವುದಿಲ್ಲ.
ಹೀಗಾಗಿಯೇ ಲೂಟಿಕೋರರು ಇತಿಹಾಸದಲ್ಲಿ ಹೀರೋಗಳಾದರೆ ಅವರನ್ನು ಹೆಡೆಮುರಿ ಕಟ್ಟಿದ ಪರಾಕ್ರಮಿ ಭಾರತೀಯ ರಾಜರುಗಳು ಮಾತ್ರ ಮೂಲೆ ಗುಂಪಾಗುತ್ತಾರೆ. ಹೀಗೆ ಮೂಲೆಗುಂಪಾಗಿರುವ ಮತ್ತೋರ್ವ ಮಹಾನ್ ಚೇತನದ ಕುರಿತು ನಿಮ್ಮೆದುರಿಗೆ ಹೇಳುವುದಕ್ಕೆಂದು ಈ ವಾರ ಈ ವಿಷಯವನ್ನು ಎತ್ತಿಕೊಂಡು ಬಂದಿದ್ದೇನೆ. ಅಂದಹಾಗೆ ತಮಗೆ ರಾಣಿ ನಾಯಕಿದೇವಿ ಗೊತ್ತೆ? ಖಂಡಿತವಾಗಿ ನೀವು ಹೇಳುವ ಉತ್ತರ ಇಲ್ಲ ಎನ್ನುವುದೇ ಆಗಿರುತ್ತದೆ ಎನ್ನುವುದು ನನಗೆ ಗೊತ್ತು. ಏಕೆಂದರೆ ಹೇಳಬೇಕಾದವರ ಕುರಿತು ಹೇಳದೇ ಹೋದರೆ ತಿಳಿಸಬೇಕಾದವರ ಕುರಿತು ತಿಳಿಸಿದೇ ಹೋದರೆ ಅದು ಹೇಗೆ ತಾನೆ ಗೊತ್ತಿರುವುದಕ್ಕೆ ಸಾಧ್ಯವಾಗುತ್ತದೆ ಹೇಳಿ? ಇದಕ್ಕೆ ಕಾರಣವೇನೆಂದು ನಾನು ಬಹಳ ಬಾರಿ ಚರ್ಚಿಸಿದ್ದೇನೆ.
ಮತ್ತೆ ಅದನ್ನೇ ಪ್ರಸ್ತಾಪಿಸುವುದಕ್ಕೆ ಹೋಗುವುದಿಲ್ಲ. ಅದಿರಲಿ...! ಘೋರಿ ಎನ್ನುವ ಅಪ್ಘನ್‌ನ ದಾಳಿಕೋರ ಭಾರತಕ್ಕೆ ಬಂದಾಗ ಅವನ ಸೇನೆಯ ದಂಡನಾಯಕನಾಗಿ ಬಂದಂತ ಕುತುಬುದ್ದಿನ್ ಐಬಕ್ ಎನ್ನುವ ಗುಲಾಮ ಘೋರಿಯ ಮರಣದ ನಂತರದಲ್ಲಿ ದೆಹಲಿಯ ಗದ್ದುಗೆ ಏರಿ ಗುಲಾಮಿ ಸಂತತಿಯನ್ನು ಹುಟ್ಟು ಹಾಕಿದ್ದನ್ನು ನಮಗೆ ಇತಿಹಾಸದ ಪಠ್ಯ ಪುಸ್ತಕ ಹೇಳಿದೆ. ಹಾಗೂ ಆತನ ಸಾಮ್ರಜಾಯ ವಿಸ್ತರಣಾ ನೀತಿಯನ್ನು ಹಾಗೂ ಅವನ ಹೋರಾಟದ ಹಾದಿಯನ್ನು ಬಗೆ ಬಗೆಯಾಗಿ ಉಲ್ಲೇಖ ಮಾಡಿ ನಮಗೆಲ್ಲ ತಿಳಿಸಿದೆ.
ಆದರೆ ಆತನನ್ನು ಸಾವಿನ ಮನೆಯ ಬಾಗಿಲಲ್ಲಿ ಕಾಯುವಂತೆ ಮಾಡಿದ ಗಟ್ಟಿಗಿತ್ತಿ ಹೆಣ್ಣು ಮಗಳ ಬಗ್ಗೆ ನಮಗ್ಯಾರಿಗೂ ಹೇಳಲೇ ಇಲ್ಲ. ಅವನ ಸಾವನ್ನು ಕುರಿತು ಹೇಳುವಾಗ ಹಾರ್ಸ್‌ಪೋಲೊ ಆಟವನ್ನು ಆಡುವಾಗ ಕುದುರೆಯ ಮೇಲಿಂದ ಬಿದ್ದು ಸತ್ತನೆಂದು ಹೇಳಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವನ ಸಾವಿನ ಕುರಿತಾಗಿಯೂ ಪ್ರಶ್ನೆ ಕೇಳಿದ್ದೇವೆ. ಆದರೆ ವಿಚಿತ್ರ ಎಂದರೆ ನಮ್ಮ ಭಾರತೀಯ ಇತಿಹಾಸಕಾರರು ರಚಿಸಿದ ಪಠ್ಯಕ್ಕಿಂತ ಪರ್ಷಿಯಾದ ಇತಿಹಾಸಕಾರರು ಉಲ್ಲೇಖಿಸಿದ ಮಾಹಿತಿ ಹಾಗೂ ಚಿತ್ತೋರಗಡದ ಚರಿತ್ರೆಯ ಪುಟಗಳೇ ಈ ವಿಚಾರದ ಮೇಲೆ ಬೇರೆ ರೀತಿಯಲ್ಲಿಯೇ ಬೆಳಕು ಚಲ್ಲುತ್ತವೆ.
ನಾನಿವಾಗ ಅದರ ಕುರಿತಾಗಿ ಹೇಳುವುದಕ್ಕೆ ಹೊರಟಿದ್ದೇನೆ. ಮೇಲೆ ಘೋರಿಗೆ ಸೋಲಿನ ರುಚಿ ತೋರಿಸಿ ಭಾರತದಿಂದ ಓಡಿಸಿದ ಮಹಾರಾಣಿ ನಾಯಕಿದೇವಿಯ ಮಗಳಾದ ಕೂರ್ಮಾದೇವಿಯು ಐಬಕ್‌ನಿಗೆ ಅದ್ಯಾವ ರೀತಿ ಕಾಡಿದಳು ಕೊನೆಗೆ ಆ ಚಿತ್ತೋರಗಡದ ಕುದುರೆಯಿಂದ ಆತ ಹೇಗೆ ಸತ್ತನೆಂಬುದನ್ನು ನಾನಿಗ ತಮ್ಮೆದುರು ತಿಳಿಸುವ ಕಾರ್ಯಕ್ಕೆ ಅಣಿಯಾಗುತ್ತಿದ್ದೇನೆ.
ಇತಿಹಾಸ ಎನ್ನುವುದು ಹಲವು ರೋಚಕ ಸಂಗತಿಗಳ ಸಾಗರವಾದರೆ ಮತ್ತೆ ಕೆಲವು ಬಾರಿ ಮುಚ್ಚಿಟ್ಟ ಸತ್ಯವಾಗಿದೆ. ಇನ್ನು ಕೆಲವು ಸಂದರ್ಭಗಳಲ್ಲಂತೂ ಅದು ತಿರುಚಿದ ಸಂಗತಿಯಾಗಿದೆ. ಹೀಗೆ ತಿರುಚಿದ ಇತಿಹಾಸದ ಪುಟಗಳಲ್ಲಿ ನಮ್ಮವರು ಮರೆಯಾಗಿ ಹೋಗಿದ್ದಾರೆ. ಹಾಗೆ ಮರೆಯಾಗಿ ಹೋಗಿದ್ದು ಚಿತ್ತೋರಗಡದ ಸೋಲಂಕಿ ಮನೆತನದ ರಾಣಿ ಕೂರ್ಮಾದೇವಿ. ಕೂರ್ಮಾದೇವಿಯ ಸಾಹಸಗಾಥೆಯನ್ನು ಕೇಳುವುದಕ್ಕಿಂತ ಮೊದಲು ಒಂದಷ್ಟು ಗುಲಾಮಿ ಸಂತತಿಯ ಸ್ಥಾಪಕನಾದ ಕುತುಬುದ್ದಿನ ಐಬಕ್‌ನ ಕುರಿತು ನೋಡೋಣಾ. 1150ರಲ್ಲಿ ಪರ್ಷಿಯಾದಲ್ಲಿ ಜನಿಸಿದ ಕುತುಬುದ್ದಿನ್ ಐಬಕ್‌ನನ್ನು ಅವರ ಹೆತ್ತರವರು ಖಾಜಿ ಫಕ್ರುದಿನ್ ಅಬ್ದುಲ್ ಅಜೀಜ್ ಕೂಫಿ ಎನ್ನುವ ಶ್ರೀಮಂತನಿಗೆ ಮಾರಾಟ ಮಾಡಿದರು.
ಗುಲಾಮಗಿರಿಯ ಬಂಧನದಲ್ಲಿ ಸೇರಿಕೊಂಡ ಐಬಕ್ ಅಲ್ಲಿಯೇ ಇದ್ದುಕೊಂಡು ಒಂದಷ್ಟು ಕುದುರೆ ಸವಾರಿ ಹಾಗೂ ಭರ್ಚಿ ಎಸೆತವನ್ನು ಕಲಿತುಕೊಂಡನು. ಅದೃಷ್ಟ ಎನ್ನುವುದು ಒಲಿದು ಬಂದರೆ ತಿರುಕನು ಸಹ ರಾಜನಾಗುವ ಕಥೆಯನ್ನು ಕೇಳಿದವರು ನಾವು. ಆದರೆ ಈ ಐಬಕ್ ನ ವಿಷಯದಲ್ಲಿ ಆ ಕಥೆ ಸತ್ಯವಾಗಿದೆ. ಗುಲಾಮಗಿರಿಯ ಬದುಕಿನಲ್ಲಿದ್ದ ವ್ಯಕ್ತಿಯೊಬ್ಬ ಮುಂದೆ ಸಿಂಹಾಸನವೇರಿ ಆಳ್ವಿಕೆ ಮಾಡಿದ್ದು ಬಹುಶಃ ಈತ ಮಾತ್ರ ಎಂದೆನಿಸುತ್ತದೆ. ಖರಿದಿ ಮಾಡಿ ಕೂಫಿ ಮತ್ತೆ ಇವನನ್ನು ಶಹಹಾಬುದ್ದಿನ್ ಅಲಿಯಾಸ್ ಮುಜುಬುದ್ದಿನ್ ಮಹ್ಮದ್ ಘೋರಿಗೆ ಮಾರಾಟ ಮಾಡುತ್ತಾನೆ.
ಘೋರಿಯಿಂದ ಖರೀದಸಲ್ಪಟ್ಟ ಕುತುಬುದ್ದಿನ್ ಐಬಕ್ ತನ್ನ ನಡೆಯಿಂದ ಗುಲಾಮಗಿರಿಯ ಸರಪಳಿಯಿಂದ ಮುಕ್ತನಾಗಿ ಮಹ್ಮದ್ ಘೋರಿಯ ಸೇನೆಯನ್ನು ಸೇರಿಕೊಳ್ಳುತ್ತಾನೆ. ತನ್ನ ಚಾಕಚಕ್ಯತೆಯಿಂದ ಘೋರಿಯ ಮನಸ್ಸನ್ನು ಗೆದ್ದ ಈತ ಮುಂದೆ ಅವನ ಸೇನೆಯ ದಂಡನಾಯಕನಾಗುತ್ತಾನೆ. 1191 ನಲ್ಲಿ ನಡೆದ ತರೈನ್‌ಯುದ್ದದಲ್ಲಿ ಪೃಥ್ವಿರಾಜ್ ಚೌಹಾಣ್‌ನೊಂದಿಗೆ ಸೋತು ಓಡಿ ಬಂದಿದ್ದ ಘೋರಿ 1192ರಲ್ಲಿ ಎರಡನೇ ಬಾರಿ ಮತ್ತೆ ತರೈನ್ ಯುದ್ಧಕ್ಕೆ ಅಣಿಯಾದ.
ನೇರವಾಗಿ ಪೃಥ್ವಿರಾಜನನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡಿದ್ದ ಈತ ರಾತ್ರಿವೇಳೆಯಲ್ಲಿ ದಾಳಿ ಮಾಡಿ ಪೃಥ್ವಿರಾಜ್ ಚೌಹಾಣನನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾನೆ. ಈ ಹೋರಾದಲ್ಲಿ ಕುತುಬುದ್ದಿನ್ ಐಬಕ್ ಭಾಗಿಯಾಗಿದ್ದು ಇದೇ ಕಾಳಗ ಅವನ ಬೆನ್ನಿಗೆ ಸಾವನ್ನು ಹೊರಿಸಿ ಕಳುಹಿಸುತ್ತದೆ. ಕಾರಣ ಪೃಥ್ವಿರಾಜ್ ಚೌಹಾಣ್ ಹೋರಾಟಕ್ಕಿಳಿದ ಸಂದರ್ಭದಲ್ಲಿ ಆತನ ಸಹೋದರಿ ಪೃಥಾಬಾಯಿಯ ಗಂಡ ಚಿತ್ತೋರದಘಡದ ರಾಜನಾಗಿದ್ದ ಸಮರ್ ಸಿಂಗ್ ಹಾಗೂ ಆತನ ಮಗನಾದ ಕಲ್ಯಾಣಸಿಂಗ್‌ರು ಪೃಥ್ವಿರಾಜನಿಗೆ ಯುದ್ಧದಲ್ಲಿ ನೆರವಾಗುವುದಕ್ಕೆ ಧಾವಿಸಿರುತ್ತಾರೆ.
ಯುದ್ಧಭೂಮಿಯಲ್ಲಿ ಹೋರಾಡುತ್ತ ಈರ್ವರು ಕುತುಬುದ್ದಿನ್ ಐಬಕ್‌ನ ದಾಳಿಗೆ ವೀರಮರಣವನ್ನು ಅಪ್ಪುತ್ತಾರೆ. ಈ ವಿಷಯ ತಿಳಿದ ಪೃತಾಬಾಯಿ ಜೋಹರ್ ಪದ್ಧತಿಯನ್ನು ಅನುಸರಿಸಿ ಚಿತೆ ಏರಿ ್ರಾಣಾರೆ್ಪಣ ಮಾಡುತ್ತಾಳೆ. ಇಲ್ಲಿಗೆ ಚಿತ್ತೋರಗಡದ ಕಥೆ ಮುಗಿಯಿತು ಎಂದು ಎಲ್ಲರೂ ತಿಳಿದುಕೊಂಡ ಸಂದರ್ಭದಲ್ಲಿಯೇ ಅಲ್ಲೊಂದು ಸೇಡಿನ ಜ್ವಾಲೆ ಕಾಳ್ಗಿಚ್ಚಾಗಿ ಕುತುಬುದ್ದಿನ್ ಐಬಕ್‌ನ ಸಾವಿನೊಂದಿಗೆ ಶಾಂತವಾಗುತ್ತದೆ. ಆ ಕಳ್ಗಿಚ್ಚಿನ ಹೆಸರೇ ರಾಣಿ ಕೂರ್ಮಾದೇವಿ.
ಆಗಿನ ಕಾಲದಲ್ಲಿ ರಾಜರುಗಳು ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿಸಿಕೊಳ್ಳುವುದಕ್ಕೆ ಒಬ್ಬಳಿಗಿಂತ ಹೆಚ್ಚು ರಾಣಿಯರನ್ನು ಮದುಯಾಗುತ್ತಿದ್ದರು. ಹಾಗೆ ಮೊದಲ ಮಡದಿಯಾಗಿ ಪೃಥ್ವಿರಾಜನ ಸಹೋದರಿಯನ್ನು ಮದುವೆಯಾದ ಸಮರ ಸಿಂಗನು ನಂತರದಲ್ಲಿ ಗೋವಾದ ಕದಂಬರ ರಾಣಿ ನಾಯಕಿದೇವಿಯ ಮಗಳಾದ ಕೂರ್ಮಾದೇವಿಯನ್ನು ಮದುವೆಯಾದರು. ಅವರಿಗೆ ಜನಿಸಿದ ಮಗನೇ ‘ಕರ್ಣಸಿಂಗ್’ಇತ್ತ ಯುದ್ಧದಲ್ಲಿ ಸಮರಸಿಂಗ್‌ನು ಸಾವೀಗೀಡಾಗುತ್ತಲೇ ಮೊದಲ ಮಡದಿ ಜೋಹರ್ ಪದ್ಧತಿ ಅನುಸರಿಸಿದಳು.
ಎರಡನೇ ಮಡದಿಯಾಗಿದ್ದ ಕೂರ್ಮಾದೇವಿಯೂ ಅದೇ ದಾರಿಯಲ್ಲಿ ಸಾಗಬೇಕೆಂದು ತೀರ್ಮಾನಿಸಿದಾಗ ಕರ್ಣಸಿಂಗ್ ಇನ್ನು 12 ವರ್ಷದ ಚಿಕ್ಕ ಮಗುವಾಗಿದ್ದ. ಒಂದು ವೇಳೆ ಹೀಗೆಯೇ ಹೊರಟು ಹೋದರೆ ಗುಜರಾತಿನ ಈ ಮನೆತನದ ಜೊತೆಗೆ ಮಗನು ಸಹ ನಾಶವಾಗುತ್ತಾನೆ ಎನ್ನುವ ವಿಚಾರಕ್ಕಾಗಿ ಸಾವಿನ ಮನೆಯ ಬಾಗಿಲಿನಿಂದ ಬದುಕಿನ ಅಂಗಳಕ್ಕೆ ಹೆಜ್ಜೆ ಹಾಕಿದ ಕೂರ್ಮಾದೇವಿ ತನ್ನ ಮಗನಾದ ಕರ್ಣಸಿಂಗ್‌ನನ್ನು ಪಟ್ಟದ ಮೇಲೆ ಕೂರಿಸಿ ರಾಜ್ಯಾಡಳಿತದ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡಳು.
ಹೇಳಿಕೇಳಿ ಕದಂಬ ವಂಶದ ಕುಡಿಯಾಗಿದ್ದ ಆಕೆಗೆ ರಾಜ್ಯಭಾರ ಎನ್ನುವುದು ರಕ್ತಗತವಾಗಿಯೇ ಬಂದು ಬಿಟ್ಟಿತ್ತು. ಅದರಲ್ಲೂ ಅವಳ ಶರೀರದ ಕಣಕಣದಲ್ಲಿಯೂ ತಾಯಿ ನಾಯಕಿದೇವಿಯ ವೀರತ್ವವೇ ಹರಿಯುತ್ತಿತ್ತು. ಹೀಗಾಗಿ ತಮ್ಮ ರಾಜ್ಯಕ್ಕೆ ಈ ಸ್ಥಿತಿಯನ್ನು ತಂದ ಕುತುಬುದ್ದಿನ್ ಐಬಕ್‌ನನ್ನು ಸಂಹರಿಸುವ ವರೆಗೂ ನಾನು ವಾಪಸ್ಸು ಚಿತ್ತೋರಗಡಕ್ಕೆ ಬರಲಾರೆ ಎಂದು ನಿರ್ಧಾರ ಮಾಡಿದಳು.
ಭಾರತದಲ್ಲಿ ತಾನು ಗೆದ್ದ ಪ್ರದೇಶಗಳನ್ನು ನೋಡಿಕೊಳ್ಳುವುದಕ್ಕೆಂದು ಘೋರಿಯು ಕುತುಬುದ್ದಿನ್ ಐಬಕ್‌ನನ್ನು ನೇಮಕ ಮಾಡಿ ಹೋಗಿದ್ದನು.ಇದೇ ಸಮಯಕ್ಕೆ ಸರಿಯಾಗಿ ಘೋರಿಯ ಸಾವಿನ ನಂತರದಲ್ಲಿ ದೇಹಲಿಯ ಸಿಂಹಾಸನವನ್ನು ಸ್ವತಂತ್ರವಾಗಿ ಆಳುವುದಕ್ಕೆಂದು ಗುಲಾಮಿ ಸಂತತಿಯನ್ನು ಹುಟ್ಟು ಹಾಕಿ ಐಬಕ್ ದೆಹಲಿ ಆಳುವುದಕ್ಕೆ ಮುಂದಾದ. ಇದ್ದಷ್ಟರಲ್ಲಿ ತೃಪ್ತಿ ಪಡದ ಅತೃಪ್ತ ಆತ್ಮಗಳಿಂದ ಜನಿಸಿದ ಐಬಕ್ ತನ್ನ ಸಾಮ್ರಾಜ್ಯವನ್ನು ವಿಸ್ತಿಸುವುದಕ್ಕೆಂದು ನಿರ್ಧಾರ ಮಾಡಿ ಚಿತ್ತೋರಗಢದ ಕಡೆ ದಾಲಿಗೆ ಹೊರಡಲು ಸಜ್ಜಾಗಿ ನಿಂತ.
ಇದರ ಸುಳಿವನ್ನು ತಿಳಿದಿದ್ದ ಕೂರ್ಮಾದೇವಿ ಕೇವಲ ತಾನೊಬ್ಬಳೇ ನಿಂತುಕೊಂಡು ಐಬಕ್‌ನ ಸೈನ್ಯವನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದನು ಮನಗಂಡು ಸುತ್ತಲು ಇರುವ ರಾಜ ಮಹಾರಾಜರಿಗೆ ಭಾರತದ ಅಖಂಡತೆಯ ಪಾಠ ಬೋಧಿಸಿದಳು. ನಾವು ಈಗ ಒಂದಾಗದೇ ಇದ್ದರೆ ಮುಂದೆ ನಾವು ಇರುವುದಕ್ಕೂ ಅವಕಾಶ ಇರುವುದಿಲ್ಲ ಎನ್ನುವುದನ್ನು ತಿಳಿಸಿಕೊಟ್ಟಳು. ಪರಿಣಾಮ ರಾಣಿಯ ಮಾತಿಗೆ ಒಂದಾದ ಸುತ್ತಲಿನ ರಾಜರುಗಳು ಯುದ್ಧಕ್ಕೆ ಸಜ್ಜುಗೊಂಡರು. ರಾಣಿಯ ಕುಶಲ ರಾಜತಾಂತ್ರಿಕ ದೃಷ್ಠಿಕೋನದ ಪರಿಣಾಮವಾಗಿ 11 ಜನ ರಾಜರಗಳು ಹಾಗೂ 14 ಜನ ಕಮಾಂಡರ್‌ಗಳ ಪಡೆ ಸಿದ್ಧಗೊಂಡು ಐಬಕ್‌ನ ಸದ್ದಡಗಿಸಲು ನಿಂತವು.
ಅದೃಷ್ಠದ ಪರಿಣಾಮವಾಗಿ ಅಧಿಕರದ ಗದ್ದುಗೆ ಹಿಡಿದಿದ್ದ ಗುಲಾಮ ಇದೀಗ ಸೊಕ್ಕಿನಿಂದ ಉಕ್ಕೇರಿ ಚಿತ್ತೋರಗಢದೆಡೆಗೆ ನುಗ್ಗಲು ಹೊರಾಟಗ ಅಂಬರಕೊಟೆಯಲ್ಲಿ ಕೂರ್ಮಾದೇವಿಯ ಸೈನ್ಯಕ್ಕೆ ಎದುರಾಗಬೇಕಾಯಿತು. ರಾಜನಿಲ್ಲದ ಚಿತ್ತೋರಗಢವನ್ನು ಕ್ಷಣಮಾತ್ರದಲ್ಲಿ ವಶಮಾಡಿಕೊಂಡು ಬಿಡುವ ಹುಚ್ಚು ಆಸೆಯಿಂದ ಹೊರಟಿದ್ದ ಐಬಕ್ ಇಲ್ಲಿ ಬಂದ ಸೈನ್ಯದೊಂದಿಗೆ ಹೋರಾಡುವುದು ಅಕ್ಷರಶಃ ಸಿಂಹದ ಗುಹೆಯಲ್ಲಿ ನುಗ್ಗಿದ ಅನುಭವವನ್ನು ಕಂಡುಕೊಂಡಂತಾಗಿತ್ತು.
ಬಿರುಗಾಳಿಯಂತೆ ನುಗ್ಗಿ ಬರುತ್ತಿದ್ದ ಕೂರ್ಮಾದೇವಿಯ ಸೈನ್ಯದ ಎದುರು ದೆಹಲಿಯ ಸುಲ್ತಾನನ ಸೈನ್ಯ ಮಕಾಡೆ ಮಲಗ ಹತ್ತಿತು. ರಾಣಿಯ ಸೈನ್ಯ ಹೋರಾಡುತ್ತಿದ್ದುದು ದೇಶದ ಅಖಂಡತೆಯ ಅಸ್ಮಿತೆಗಾಗಿ. ಆದರೆ ಸುಲ್ತಾನನ ಸೈನ್ಯ ಹೋರಾಡುತ್ತಿದ್ದುದು ರಾಜನ ಆಜ್ಞೆಯನ್ನು ಪಾಲಿಸುವುದಕ್ಕಾಗಿ ಇಂಥ ಸನ್ನಿವೇಶದಲ್ಲಿ ಹೋರಾಟ ಹೇಗಿರಬಹುದು ಎನ್ನುವುದನ್ನು ಊಹಿಸಿದರೆ ಮೈ ರೋಮಾಂಚನಗೊಳ್ಳುತ್ತದೆ. ಯುದ್ಧದ ಮಧ್ಯದಲ್ಲಿ ಕುದುರೆಯನ್ನು ನುಗ್ಗಿಸಿಕೊಂಡು ಹೋದ ಕೂರ್ಮಾದೇವಿ ಕುತುಬುದ್ದಿನ್ ಐಬಕ್‌ನನ್ನು ಉದ್ಧೇಶಿಸಿ ಅಕ್ಷರಶಃ ಅವಳಮ್ಮ ನಾಯಕಿ ದೇವಿ ಘೋರಿಗೆ ಕರೆದಂತೆ “ಇಡೀ ಸೈನ್ಯದೊಂದಿಗೆ ಹೋರಾಡುತ್ತ ಅವರ ಸಾವಿಗೇಕೆ ಕಾರಣವಾಗುತ್ತಿಯ.
ನಿನಗೆ ತಾಕತ್ತಿದ್ದರೆ ನನ್ನ ಜೊತೆ ನೇರವಾಗಿ ಹೋರಾಟಕ್ಕಿಳಿದ” ಎಂದು ಹೇಳಿ ಯುದ್ಧಕ್ಕೆ ಪ್ರಚೋದಿಸಲು ಪ್ರಾರಂಭಿಸಿದಳು. ಅದರಲ್ಲೂ ಒಬ್ಬ ಪತಿಯನ್ನು ಕಳೆದುಕೊಂಡ ಹೆಣ್ಣುಮಗಳು ತನ್ನ ಪೌರುಷದ ಬಗ್ಗೆ ಮಾತನಾಡುತ್ತಾಳೆಂದರೆ ಯಾವ ಗಂಡಿಗಾದರು ಸುಮ್ಮಿರಲು ಸಾಧ್ಯವಾಗುತ್ತದೆ ಹೇಳಿ? ಆದರೆ ಈತ ಅಪ್ಘನ್‌ನಲ್ಲಿ ಪರದೆಯ ಹಿಂದೆ ಮರೆಯಾಗಿ ನಿಲ್ಲುತ್ತಿದ್ದ ಹೆಣ್ಣುಗಳನ್ನು ಕಂಡಿದ್ದನೇ ಹೊರತು ಪುರುಷನಿಗೆ ಸರಿ ಸಮನಾಗಿ ಸಿಂಹದಂತೆ ಸಾಗಿ ಬಂದು ಬೇಟೆಯಾಡುವ ಹೆಣ್ಣುಮಕ್ಕಳನ್ನು ಕಂಡಿದ್ದಿಲ್ಲ. ಘೋರಿಯೂ ಇದೇ ತಪ್ಪನ್ನು ಮಾಡಿ ನಾಯಕಿ ದೇವಿಯಿಂದ ಮಣ್ಣು ಮುಕ್ಕಿದ್ದ.
ಇಲ್ಲಿಯೂ ಸಹ ಕೂರ್ಮಾದೇವಿಯ ಪ್ರಚೋದನೆಗೆ ಹಲ್ಲು ಕಚ್ಚುತ್ತ ಬಂದ ಕುತುಬುದ್ದಿನ್ ಐಬಕ್ ಕೇವಲ ಒಂದೇ ಒಂದು ಕೂರ್ಮಾದೇವಿಯ ಖಡ್ಗದ ಹೊಡೆತಕ್ಕೆ ನೆತ್ತರು ಕಾರುತ್ತ ನೆಲಕ್ಕೆ ಉರುಳಿ ಮೂರ್ಛೇ ಹೋದ. ಇತ್ತ ಸುಲ್ತಾನ ನೆಲಕ್ಕೆ ಬೀಳುತ್ತಿದ್ದಂತೆ ಆತನ ಸೈನ್ಯ ಧಿಕ್ಕಾಪಾಲಾಗಿ ಓಡತೊಡಗಿತು. ತೊಡೆಯಿಂದ ಎದೆಭಾಗದವರೆಗೂ ಚಿಮ್ಮಿದ ರಕ್ತ ಆತನನ್ನು ಸಾವಿನ ಮನೆಯ ಬಾಗಿಲಲ್ಲಿ ತಂದು ನಿಲ್ಲಿಸುತು. ಅವನು ಸತ್ತಿರಬಹುದು ಎಂದು ತಿಳಿದು ಕೂರ್ಮಾದೇವಿ ಮರಳಿ ಚಿತ್ತೋರಗಢಕ್ಕೆ ಬಂದು ಜೋಹರ್ ಪದ್ಧತಿ ಅನುಸರಿಸಿ ಪಂಚಭೂತಗಳಲ್ಲಿ ಲೀನವಾದಳು.
ಪಾಪಿ ಚಿರಾಯು ಅನ್ನುವ ಮಾತನ್ನು ನಾವು ಕೇಳಿದ್ದೇವೆ. ಹಾಗೆಯೇ ಯುದ್ಧಭೂಮಿಯಲ್ಲಿ ರಾಣಿಯ ಮರ್ಮಾಘಾತಕ್ಕೆ ಮೂರ್ಛೆ ಹೋಗಿದ್ದ ಐಬಕ್ ಕೆಲವು ದಿನಗಳ ನಂತರದಲ್ಲಿ ಸುಧಾರಿಸಿಕೊಂಡು ಮತ್ತೆ ಮೇಲೆದ್ದು ಕುಳಿತನು. ಸಾವಿನ ಮನೆಯ ದರ್ಶನ ಮಾಡಿಸಿದ್ದ ರಾಜ್ಯದ ಮೇಲೆ ಹೇಗಾದರೂ ಮಾಡಿ ಪ್ರತಿಕಾರ ತೀರಿಸಿಕೊಳ್ಳಲೇ ಬೇಕು ಎನ್ನುವ ಸಿಟ್ಟಿನಿಂದ ಪೆಟ್ಟುತಿಂದ ಹಾವಿನಂತೆ ಬುಸುಗುಡುತ್ತಲಿದ್ದ. ಮತ್ತೆ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಚಿತ್ತೋರಗಢದ ಮೇಲೆ ದಾಳಿ ಮಾಡುವುದಕ್ಕೆ ಹೊರಟನು.
ಶತ್ರು ಸತ್ತಿದ್ದಾನೆಂದುಕೊಂಡು ಜೋಹರ್‌ಪದ್ಧತಿ ಅನುಸರಿಸಿ ರಾಣಿ ಕೂರ್ಮಾದೇವಿ ಅದಾಗಲೇ ಪ್ರಪಂಚವನ್ನು ತೊರೆದಿದ್ದಳು. ಇದನ್ನು ತಿಳಿಸುಕೊಂಡು ದಾಳಿಗೆ ಮುಂದಾಗಿದ್ದ ಐಬಕ್ ಚಿತ್ತೋರಗಢದ ಸೋಲಂಕಿಗಳಿಂದ ಸಾಕಷ್ಟು ಪ್ರತಿರೋಧ ಎದುರಿಸಿದರೂ ಕೂಡ ರಾಣಿಯ ಸಾವಿನ ನಂತರದಲ್ಲಿ ಮಾಡಿಕೊಂಡಿದ್ದ ರಾಜರೂಗಳ ಒಕ್ಕೂಟ ಮುರಿದು ಬಿದ್ದಾಗಿತ್ತು. ಹೀಗಾಗಿ ಯಾವ ರಾಜರುಗಳು ನೆರವಿಗೆ ಬಾರದ ಕಾರಣ ಕೂರ್ಮಾದೇವಿಯ ಮಗ ಕರ್ಣಸಿಂಹ ಹೋರಾಡುತ್ತಲೇ ಶತ್ರುವಿನ ಕೈಗೆ ಸೆರೆಯಾಗಬೇಕಾಯಿತು.
ಕುತುಬುದ್ದಿನ್ ಐಬಕ್ ಕೇವಲ ಕರ್ಣಸಿಂಗ್‌ನನ್ನು ಸೆರೆ ಹಿಡಿದು ಕರೆದುಕೊಂಡು ಹೋಗಿದ್ದರೆ ಬಹುಶಃ ನಾನು ಇಲ್ಲಿ ಕೂರ್ಮಾದೇವಿಯ ನಂತರದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸುತ್ತಿರಲಿಲ್ಲ. ಆದರೆ ಐಬಕ್ ಮಾಡಿದ ಒಂದು ಎಡವಟ್ಟು ಆತನ ಬದುಕನ್ನೇ ಬರ್ಬಾದ್ ಮಾಡಿ ಸಾವಿನ ಮನೆಗೆ ನೂಕಿದ್ದು ಮಾತ್ರ ಇಲ್ಲಿ ರಣರೋಚಕ ಇತಿಹಾಸಕ್ಕೆ ಸಾಕ್ಷಿ ನೀಡುತ್ತದೆ. ಭಾರತೀಯ ಇತಿಹಾಸಕಾರರಿಂದ ನಿರ್ಮಾಣವಾದ ಪಠ್ಯದಲ್ಲಿ ಐಬಕ್ ಪೋಲೋ ಆಡುವಾಗ ಕುದುರೆಯಿಂದ ಬಿದ್ದು ಸತ್ತು ಹೋದ ಎಂದಿದೆ.
ಆದರೆ ಪರ್ಷಿಯಾದ ಇತಿಹಾಸ ಹಾಗೂ ಚಿತ್ತೋರಗಢದ ಇತಿಹಾಸವೇ ಬೇರೆ ಹೇಳುತ್ತದೆ. ಇದರಲ್ಲಿ ಉಲ್ಲೇಖಿತ ವಿಷಯವನ್ನು ನೋಡಲಾಗಿ ಹೇಗೆ ಹಲ್ದಿಘಾಟಿಯುದ್ಧದಲ್ಲಿ ಸ್ವಾಮಿ ನಿಷ್ಠೆ ಮೆರೆದ ಚೇತಕ್ ಎನ್ನುವ ಕುದುರೆಯು ಮಹಾರಾಣಾಪ್ರತಾಪಸಿಂಹನ ಪ್ರಾಣ ಉಳಿಸುವುದಕ್ಕೆ ತನ್ನ ಪ್ರಾಣವನ್ನು ನೀಡಿತೋ ಹಾಗೆ ಇಲ್ಲಿಯೂ ಸಹ ಕರ್ಣಸಿಂಗ್‌ನ ಪ್ರೀತಿಯ ಕುದುರೆಯಾದ ‘ಶುಭ್ರಕ್’ ಸಹ ತನ್ನ ಒಡೆಯನ ಪ್ರಾಣ ಉಳಿಸುವುದಕ್ಕೆಂದು ಐಬಕ್‌ನನ್ನು ಸಾಯಿಸಿ; ಕೊನೆಗೆ ರಾಜಕುಮಾರನನ್ನು ತನ್ನ ಅರಮನೆಗೆ ಸೇರಿಸಿ ಪ್ರಾಣ ಬಿಟ್ಟಿದ್ದು ಮಾತ್ರ ಅದ್ಭುತ ಎನಿಸುತ್ತದೆ.
ಇತ್ತ ಕರ್ಣಸಿಂಗ್‌ನನ್ನು ಬಂಧಿಸಿ ತಂದ ಐಬಕ್ ಅವನ ತಲೆಯನ್ನು ಕತ್ತರಿಸಿ ಪೋಲೊ ಆಟವಾಡುವುದಕ್ಕೆ ಆದೇಶ ನೀಡಿದ. ಆ ತಲೆ ಕತ್ತರಿಸುವ ದೃಶ್ಯವನ್ನು ನೋಡುವುದಕ್ಕೆಂದು ಚಿತ್ತೋರಗಢದಿಂದ ಕರೆದುಕೊಂಡು ಬಂದಿದ್ದ ‘ಶುಭ್ರಕ್’ನನ್ನು ಏರಿ ಕರ್ಣಸಿಂಗ್ ಇರುವಲ್ಲಿಗೆ ಕುತುಬುದ್ದಿನ ಐಬಕ್ ಬಂದನು. ಅದಾಗಲೇ ಸಾಕಷ್ಟು ಬಾರಿ ಐಬಕ್‌ನ ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದ ಕರ್ಣಸಿಂಗ್ ಹತಾಶನಾಗಿದ್ದ. ಇದೇ ಸಮಯಕ್ಕೆ ಸರಿಯಾಗಿ ರಣಾಂಗಣ ಪ್ರವೇಶಿಸಿದ ಶುಭ್ರಕ್‌ನನ್ನು ಕಂಡ ಕರ್ಣಸಿಂಗ್ ಕಣ್ಣೀರಾಗಿ ಹೋದ. ತಾನು ಮುದ್ದಿನಿಂದ ಸಾಕಿದ್ದ ಕುದುರೆಯ ಮೇಲೆ ಶತ್ರುವ ಪಾಳೆಯದ ಸರದಾರ ಕುಳಿತು ಬರುವುದನ್ನು ಕಂಡ ಕರ್ಣಸಿಂಗ್‌ನ ಹೃದಯ ಕಂಪಿಸಿತು.
ನೋವು ತಾಳಲಾರದೇ ಕಣ್ಣೀರಿಡುತ್ತಲಿದ್ದ ತನ್ನೊಡೆಯನ ಮುಖ ನೋಡಿದ ಶುಭ್ರಕ್‌ನಿಗೆ ಅದೇನಾಯಿತೋ ಗೊತ್ತಿಲ್ಲ. ಮಿಂಚಿನ ವೇಗದಲಿ ಮುನ್ನುಗ್ಗಿ ತನ್ನ ಒಡೆಯನ ಎದುರು ನಿಂತುಕೊಂಡಿತು. ಅಷ್ಟು ಮಾತ್ರವಲ್ಲದೇ ತನ್ನೆರಡು ಕಾಲುಗಳನ್ನು ಮೇಲೆತ್ತಿ ಹೇಶಾರ ಮಾಡುತ್ತ ಅಶ್ವಾರೂಢನಾಗಿದ್ದ ಕುತುಬುದ್ದಿನ್ ಐಬಕ್‌ನನ್ನು ಕೆಳಗೆ ಕೆಡವಿ ತನ್ನ ಗೊರಸುಗಳಿಂದ ಆತನ ಎದೆಯ ಮೇಲೆ ದಾಳಿ ಮಾಡಲು ಶುರುವಿಟ್ಟುಕೊಂಡಿತು.
ಸರಿ ಸುಮಾರು ಇಪ್ಪತ್ತರಿಂದ ಇಪ್ಪತೈದು ಬಾರಿ ತನ್ನ ಶಕ್ತಿ ಬಳಸಿಕೊಂಡು ಕುತುಬುದ್ದಿನ್ ಐಬಕ್‌ನ ಎದೆಗೆ ಒದ್ದು ಅಲ್ಲಿಂದ ತನ್ನೊಡೆಯನನ್ನು ಹೊತ್ತುಕೊಂಡು ಕಾಲ್ಕಿತ್ತಿತು. ಅದರ ಹೊಡೆತದ ಆಘಾತಕ್ಕೆ ಕುತುಬುದ್ದಿನ್ ಐಬಕ್ ಸ್ಥಳದಲ್ಲಿಯೇ ರಕ್ತಕಾರಿ ಪ್ರಾಣ ಬಿಟ್ಟಿದ್ದ. ಅಲ್ಲಿಂದ ಕಾಡು ಮೇಡು ಹಗಲು ರಾತ್ರಿ ಎನ್ನದೇ ಓಡಲು ಶುರುವಿಟ್ಟಿದ್ದ ಶುಭ್ರಕ್ ಚಿತೋರಗಢ್ ಕೋಟೆಯನ್ನು ತಲುಪುವ ವರೆಗೂ ನಿಲ್ಲಲಿಲ್ಲ. ಕೊನೆಗೆ ಅಂದುಕೊಂಡಂತೆ ತನ್ನ ಸ್ವಾಮಿಯನ್ನು ಚಿತ್ತೋರಗಢಕ್ಕೆ ತಲುಪಿಸಿದ ಮರುಕ್ಷಣವೇ ಕುಸಿದು ಬಿದ್ದ ಶುಭ್ರಕ್ ಸ್ವಾಮಿಗಾಗಿ ತನ್ನ ಪ್ರಾಣವನ್ನು ಆಹುತಿ ನೀಡಿತು. ಇದನ್ನು ಕಂಡ ಕರ್ಣಸಿಂಗ್‌ನು ಕಣ್ಣೀರು ಮಿಡಿದನು.
ಇಷ್ಟೆಲ್ಲ ರಣರೋಚಕ ಘಟನೆಗಳು ನಡೆದಿದ್ದರೂ ಕೂಡ ಅದನ್ನು ನಮ್ಮ ಇತಿಹಾಸದ ಪುಟಗಳು ದಾಖಲಿಸಲಿಲ್ಲ. ಬದಲಿಗೆ ಹಾಗಾಗಿಲ್ಲ ಹೀಗೆ ಎನ್ನುವಂತೆ ತಿರುಚುವ ಕಾರ್ಯಕ್ಕೆ ಅಣಿಯಾದರೇ ವಿನಃ ಇರುವುದನ್ನು ಇರುವಂತೆ ತೋರಿಸುವುದಕ್ಕೆ ಮುಂದಾಗಲಿಲ್ಲ. ಈ ಕಾರಣದಿಂದಾಗಿಯೇ ಇಂದು ಇತಿಹಾಸದ ಪುಟಗಳಲ್ಲಿ ಕ್ಷಾತ್ರ ಪರಂಪರೆಯ ಪವಿತ್ರ ಆತ್ಮಗಳು ದೂರವಾಗಿ ದೇಶವನ್ನು ದ್ವೇಷದಿಂದ ಆಳಿದ, ಧರ್ಮದ ಮೇಲೆ ಧಬ್ಬಾಳಿಕೆ ಮಾಡಿದ, ರಾಜ ಮಹಾರಾಜರುಗಳಿಗೆ ಮೋಸ ಮಾಡಿ ಆಡಳಿತ ನಡೆಸಿದ, ದೇಶವನ್ನು ಆಳುವುದಕ್ಕೆಂದು ಬಂದು ಹಾಳು ಮಾಡಿದ ಲಂಪಟರ ಕುರಿತು ಉದ್ದುದ್ದಾಗಿ ಕಲಿಸುವ ಪಠ್ಯಗಳಿಂದ ನಮ್ಮ ಮಕ್ಕಳು ಇನ್ನೇನು ಕಲಿಯುವುದಕ್ಕೆ ಸಾಧ್ಯವಾಗುತ್ತದೆ ನೀವೇ ಹೇಳಿ? ಇತಿಹಾಸದ ಪುಟದಲ್ಲಿ ದೃವರಾತೆಗಳಾಗಬೇಕಾದವರು ಮರೆಯಾಗಿದ್ದರೆ.
ಮರೆಯಾಗಬೇಕಾದವರು ಇಂದಿಗೂ ಮೆರೆಯುತ್ತಿದ್ದಾರೆ. ಎಲ್ಲಿಂದಲೋ ಬಂದು ಧಬ್ಬಾಳಿಕೆಯಿಂದ ಆಳ್ವಿಕೆ ಮಾಡಿದವರ ಕುರಿತು ಇನ್ನೂ ಓದುತ್ತಲೇ ಇದ್ದೇವೆ. ಬಹುಶಃ ಮುಂದೆಯೂ ಅದನ್ನೇ ಓದುತ್ತೇವೆ. ಏಕೆಂದರೆ ನಮ್ಮ ಇತಿಹಾಸ ಎಂದರೆ ಅದು ಸೋತವರ ಇತಿಹಾಸ ಎಂದು ಬಿಂಬಿಸಲಾಗಿದೆ. ನಮ್ಮ ಮಕ್ಕಳು ಸಹ ಅದನ್ನೇ ಓದಿ ಬೆಳೆಯುತ್ತಿದ್ದಾರೆ. ಅಂದ ಮೇಲೆ ಒಳ್ಲೇಯದನ್ನು ಓದಿ ಅಭಿಮಾನ ಪಡುವಂತೆ ಹೇಳುವವರು ಯಾರು? ಇದು ಕೇವಲ ಒಬ್ಬ ಕೂರ್ಮಾದೇವಿ ಕರ್ಣಸಿಂಗ್‌ರ ಕಥೆಯಲ್ಲ. ಇಂಥಹ ಅದೆಷ್ಟೋ ಚೇತನಗಳು ತಮ್ಮ ಶೌರ್ಯ ಪರಾಕ್ರಮವನ್ನು ಮೆರೆದು ಭಾರತದ ಚಿತ್ರೆಯಲ್ಲಿ ಚಿರಶಾಶ್ವತವಾಗಿದ್ದಾರೆ.
ಆದರೆ ಅವರನ್ನು ಹೆಕ್ಕಿ ತೆಗೆದು ನಮ್ಮ ಮಕ್ಕಳಿಗೆ ತಿಳಿಸಿ ಹೆಳುವ ಕಾರ್ಯ ಮಾತ್ರ ಮಕಾಡೆ ಮಲಗಿ ಬಿಟ್ಟಿದೆ. ನೂರಾರು ಶತಶತಮಾನಗಳ ವರೆಗೂ ಗುಲಾಮಗಿರಿಯಲ್ಲಿ ಬದುಕು ಸವೆಸಿದ್ದೇವಲ್ಲ ಅದರಿಂದಾಗಿಯೇ ಇಂದು ಸಹ ಗುಲಾಮಗಿರಿಯ ಇತಿಹಾಸವನ್ನು ಅಭಿಮಾನದಿಂದ ಓದುತ್ತಿದ್ದೇವೆ. ಅದರಿಂದ ಹೊರ ಬಂದು ಸ್ವಾಭಿಮಾನದ ಇತಿಹಾಸದ ಓದಿಗೆ ನಾವು ಸಾಕ್ಷಿಯಾಗಿದ್ದೇ ಆದಲ್ಲಿ ನಮ್ಮ ಭಾರತ ವಿಶ್ವಗುರು ಭಾರತವಾಗುವುದರಲ್ಲಿ ಎರಡು ಮಾತಿಲ್ಲ.ಅದಕ್ಕೆ ಹೇಳಿದ್ದು ಇತಿಹಾಸದ ಕರಾಳ ಸತ್ಯಗಳು ನಮಗೇ ಅರಿವಿಲ್ಲದಂತೆ ಮುಚ್ಚಿಕೊಂಡು ಹೋಗುತ್ತಿವೆ ಅಲ್ಲವೆ?