ಮರಳಿ ತಾಯ್ನಾಡಿಗೆ ಬರುವ ನಂಬಿಕೆ ಇರಲಿಲ್ಲ
ಲೋಕದರ್ಶನ ವರದಿ
ರಾಣಿಬೆನ್ನೂರು 11: ಉಕ್ರೇನ್ನಲ್ಲಿ 4 ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಾಂಗ ಮಾಡುತ್ತಿದ್ದು ರಷ್ಯಾದ ಭೀಕರ ಯುದ್ದದಿಂದ ನಮಗೆ ಭಾರೀ ಭಯ ಉಂಟಾಯಿತು. ದೊಡ್ಡ ಪ್ರಮಾಣದ ಯುದ್ದದ ಶಬ್ಧಗಳು ನಮಗೆ ಕೇಳಿಸುತ್ತಿದ್ದವು. ಮರಳಿ ತಾಯ್ನಾಡಿಗೆ ಬರುವ ನಂಬಿಕೆ ಇರಲಿಲ್ಲ. 14 ಕಿ.ಮೀ ಕಾಲ್ನಡಿಗೆ ಮೂಲಕ ಉಕ್ರೇನ್ ಗಡಿಗೆ ಬಂದು ಅನಂತರ ಭಾರತಕ್ಕೆ ಜೀವಂತ ವಾಗಿ ಮರಳಿ ಬಂದದ್ದು ಮತ್ತೊಮ್ಮೆ ಹುಟ್ಟಿ ಬಂದತಾಯಿತು ಎಂದು ಅಮಿತ್ ವೆಂಕಟೇಶ ವೈಶರ್ ಹೇಳಿದರು.
ಉಕ್ರೇನ್ನಿಂದ ಮರಳಿ ಬಂದು ಬುಧವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ಉಕ್ರೇನ್ ಬಿಡುವ ಹೊತ್ತಿಗಾಗಲೇ ಯುದ್ಧ ಆರಂಭವಾಗಿ ಬಹಳ ದಿನಗಳೇ ಕಳೆದಿದ್ದವು. ಆ ಭಯದ ವಾತಾವರಣದಿಂದ ಹೊರಬರಲು ನಾವು ಜೀವವನ್ನು ಕೈಲಿ ಹಿಡಿದುಕೊಂಡು ಬಂಕರ್ನಲ್ಲಿ ಅವಿತುಕೊಂಡಿದ್ದೆವು. ಕೊನೆಯ 2 ದಿನ ಊಟ ತಿಂಡಿ ಹಾಗೂ ಕುಡಿಯುವ ನೀರಿಗೆ ಬಹಳಷ್ಟು ಪ್ರಯಾಸ ಪಡುವಂತಾಯಿತು ಎಂದರು.
ಸುಮಾರು 6 ಸಾವಿರ ಕಿ.ಮೀ ಪ್ರಯಾಣ ಬೆಳೆಸಿ ಮರಳಿ ಊರಿಗೆ ಬಂದಾಗ ನಮಗೆ ಮತ್ತೆ ಜನ್ಮ ದೊರೆತಂತಹ ಅನುಭವ ವಾಯಿತು. ನಮ್ಮ ಎಲ್ಲಾ ಲಗೇಜುಗಳನ್ನು ಅಲ್ಲಿಯೇ ಬಿಟ್ಟು ಸುರಕ್ಷಿತ ವಾಗಿ ಊರಿಗೆ ಬರಲು ಬಹಳಷ್ಟು ಪ್ರಯಾಸ್ನ ಪಟ್ಟೆವು. ಉಕ್ರೇನ್ ಜನರ ಸಹಕಾರದಿಂದ ಹಳ್ಳಿಗಳ ಮೂಲಕ ಗಡಿಗೆ ಬಂದಾಗ ಭಾರತೀಯ ವಿದೇಶಾಂಗ ಸಚಿವಾಲಯವು ನಮಗೆ ಎಲ್ಲಾ ರೀತಿಯ ಸಹಕಾರ ನೀಡಿ ತಾಯ್ನಾಡಿಗೆ ಮರಳಲು ಶ್ರಮಿಸಿದರು ಎಂದು ವಿವರಿಸಿದರು. ತಂದೆ ಶ್ರೀಧರ, ತಾಯಿ ಸವಿತಾ ಮತ್ತಿತರರು ಇದ್ದರು.