ರೈತನಂತ ಶ್ರೇಷ್ಠ ವಿಜ್ಞಾನಿ ಜಗತ್ತಿನಲ್ಲೇ ಇಲ್ಲ: ಉಜ್ಜಯಿನಿಶ್ರೀ
ರಾಣೇಬೆನ್ನೂರ 08: ಪ್ರಕೃತಿದತ್ತವಾದ ಜಗತ್ತಿನಲ್ಲಿ ಏನೇ ಚಟುವಟಿಕೆಗಳು ನಡೆದರೂ ದೈವೀದತ್ತವಾಗಿರುತ್ತವೆ. ಇದನ್ನರಿಯದ ಮನುಜ ಸದಾ ತನ್ನ ಸ್ವಾರ್ಥದ ಬದುಕಿನಲ್ಲಿ ಜೀವನ ಸಾಗಿಸಿ ಪವಿತ್ರ ಮಾನವ ಜನ್ಮದ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಜಪಾನ್, ಅಮೇರಿಕಾ, ಚೀನಾದಂತಹ ಅನೇಕ ರಾಷ್ಟ್ರಗಳು ಎಷ್ಟೇ ಮುಂದುವರಿದರೂ ಭಾರತವನ್ನು ಮೀರಿಸುವಂತಹ ಶಕ್ತಿ ಹೊಂದಲು ಸಾಧ್ಯವೇ ಇಲ್ಲ. ಈ ದೇಶ ಸಾದು ಸಂತರ, ಋಷಿಮುನಿಗಳ ತಪ್ಪಸ್ಸಿನ ಫಲದಿಂದ ದೈವತ್ವದ ಶಕ್ತಿಯನ್ನು ಹೊಂದಿ ನಿಂತಿರುವುದರ ಪರಿಣಾಮವಾಗಿ ಈ ದೇಶದ ಭವಿತವ್ಯವನ್ನು ಯಾರೂ ಎಷ್ಟೇ ದಾಳಿ ನಡೆಸಿದರೂ ಕೂಡ ಅಳಿಸಲು ಸಾಧ್ಯವಾಗಿಲ್ಲವೆಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ಅವರು ತಾಲೂಕಿನ ದೇವಗೊಂಡನಕಟ್ಟಿ ಗ್ರಾಮದಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ನಂತರ ನಡೆದ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಭಾರತ ದೇಶ ಅತ್ಯಂತ ಶ್ರೇಷ್ಠವಾದ ದೇಶವಾಗಿದ್ದು, ಭೂಮಿಗೆ ಭೂತಾಯಿಯೆಂದು, ನೀರಿಗೆ ಗಂಗೆಯೆಂದು, ಪ್ರಕೃತಿಗೆ ಮಾತೆಯೆಂದು ಗೌರವಿಸಿ ಪೂಜಿಸಿದ ದೇಶ. ನಮ್ಮ ದೇಶವನ್ನು ಭಾರತ ಮಾತೆಯೆಂದು ಗೌರವಿಸುತ್ತೇವೆ. ಪ್ರಕೃತಿಯೇ ದೇವರೆಂದು ಪೂಜಿಸಿದ ರಾಷ್ಟ್ರ ಜಗತ್ತಿನಲ್ಲಿ ಎಲ್ಲೂ ಇಲ್ಲ. ಈ ದೇಶದ ಶ್ರೇಯಸ್ಸಿಗೆ ರೈತರು ಹಾಗೂ ಸೈನಿಕರೇ ಕಾರಣ. ರೈತ ಭೂತಾಯಿ ನಂಬಿ ಒಂದು ಬೀಜವನ್ನು ಬಿತ್ತಿದರೆ ನೂರಾರು ಕಾಳು ಪಡೆಯುತ್ತಾನೆ. ಇಂತಹ ತಂತ್ರಜ್ಞಾನವನ್ನು ಯಾವ ವಿಜ್ಞಾನಿ ಕಂಡು ಹಿಡಿದಿದ್ದಾನೆ? ರೈತನಂತ ಶ್ರೇಷ್ಟ ವಿಜ್ಞಾನಿ ಇಡೀ ಜಗತ್ತಿನಲ್ಲೇ ಇಲ್ಲವೆಂದು ಹೇಳಿ, ಧರ್ಮದ ತಳಹದಿಯಲ್ಲಿ ನಡೆದಾಗ ಮಾತ್ರ ಈ ದೇಶಕ್ಕೆ ಇನ್ನೂ ಉಜ್ವಲವಾದ ಭವಿಷ್ಯವಿದೆ ಎಂದರು.
ಶಿಕ್ಷಣವಿಂದು ಅಂಕದ ಶಿಕ್ಷಣವಾಗಿದೆ. ಹಿಂದೆ ಧರ್ಮ, ನ್ಯಾಯ, ಶ್ರದ್ದೆಯ ಕೊಡುಗೆಯನ್ನು ಶಿಕ್ಷಣದಲ್ಲಿ ಕಾಣುತ್ತಿದ್ದೆವು. ಇಂದು ಅದು ದೂರವಾಗಿದೆ. ವಿದ್ಯೆ ನೀಡುವ ಗುರಿಯಾಗಬೇಕೆ ವಿನಃ ಆದಾಯದ ವಿದ್ಯೆಯಾಗಬಾರದು. ನಾಸಾದಲ್ಲಿ 3260 ವಿಜ್ಞಾನಿಗಳು ಭಾರತದ ಮೂಲದವರಾಗಿದ್ದಾರೆ. ಇವರ ಪ್ರತಿಭೆ ನಮ್ಮ ದೇಶಕ್ಕೆ ಲಭಿಸಿದ್ದರೆ ನಮ್ಮ ರಾಷ್ಟ್ರವನ್ನು ಮೀರಿಸಲು ಯಾವ ರಾಷ್ಟ್ರದಿಂದಲೂ ಸಾಧ್ಯವಾಗುತ್ತಿದ್ದಿಲ್ಲ ಎಂದು ಹೇಳಿ ಈ ದೇಶ ನಂಬರ್ 1 ಆಗಬೇಕಾದರೆ ಇಲ್ಲಿಯ ಪ್ರತಿಭಾವಂತರು 10 ವರ್ಷ ದೇಶಕ್ಕೆ ಸೇವೆ ಸಲ್ಲಿಸಿ ಬೇರೆ ದೇಶಕ್ಕೆ ಹೋಗಬಹುದೆಂಬ ಕಾನೂನು ತಂದರೆ ಜಗತ್ತಿನಲ್ಲೇ ಬಲಿಷ್ಠ ರಾಷ್ಟ್ರ ಭಾರತವಾಗಲಿದೆ ಎಂದರು. ೆ
ವೇದಿಕೆಯಲ್ಲಿ ಪೂಜ್ಯರುಗಳಾದ ಚನ್ನಮಲ್ಲಿಕಾರ್ಜುನ ಶ್ರೀಗಳು, ಶಿವಲಿಂಗ ಶಿವಾಚಾರ್ಯರು, ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಯುವ ಮುಖಂಡರಾದ ರಾಮಲಿಂಗಣ್ಣನವರ, ಸಂತೋಷ ಪಾಟೀಲ, ಗೌಡಶಿವಣ್ಣನವರ ಉಪಸ್ಥಿತರಿದ್ದರು.