ಸೈಬರ್ ಸುರಕ್ಷತೆ, ಉದ್ಯಮಶೀಲತೆ ಕುರಿತು ಯುವಜನರಲ್ಲಿ ಜಾಗೃತಿ ಅಗತ್ಯ
ಲೋಕದರ್ಶನ ವರದಿ
ಬೆಳಗಾವಿ, ಆ.30: ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಇಂದಿನ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ಉದ್ಯಮಶೀಲತೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆನ್ಲೈನ್ ಮೋಸ ಹಾಗೂ ವಂಚನೆಯ ಜಾಲಗಳನ್ನು ಗುರುತಿಸಿ, ಅವುಗಳಿಂದ ಸುರಕ್ಷಿತವಾಗಿರುವ ಮಾರ್ಗಗಳ ಕುರಿತು ಜಾಗೃತಿ ಹೊಂದಬೇಕು ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಅಗಮ್ಯ ಟೆಕ್ ಸಮ್ಮೇಳನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಉತ್ತರ ಕರ್ನಾಟಕದ ಯುವಜನತೆ ತಂತ್ರಜ್ಞಾನ, ಸೈಬರ್ ಸುರಕ್ಷತೆ ಹಾಗೂ ಉದ್ಯಮಶೀಲತೆ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಂಡು ಮುನ್ನಡೆಯಬೇಕು. ಯುವಕರು ಕೇವಲ ಉದ್ಯೋಗ ಪಡೆಯುವ ಗುರಿಯಲ್ಲದೆ, ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಗಮ್ಯ ಸೈಬರ್ಟೆಕ್ ಸಂಸ್ಥಾಪಕ ಮಹೇಶ ವಸ್ತ್ರದ ಮಾತನಾಡಿ, ಉತ್ತರ ಕರ್ನಾಟಕದ ಯುವಜನತೆಗೆ ಸ್ಥಳೀಯವಾಗಿಯೇ ಉದ್ಯೋಗ ಮತ್ತು ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ 2020ರಲ್ಲಿ ಅಗಮ್ಯ ಸೈಬರ್ಟೆಕ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಯುವಕರು ಉದ್ಯೋಗ ಮತ್ತು ಅವಕಾಶಗಳಿಗಾಗಿ ವಿದೇಶಗಳಿಗೆ ತೆರಳುವ ಬದಲು ಉತ್ತರ ಕರ್ನಾಟಕದಲ್ಲಿಯೇ ಅವುಗಳನ್ನು ಸೃಷ್ಟಿಸಲು ಪ್ರಯತ್ನಿಸಬೇಕು ಎಂದರು.
ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲ ಮಾತನಾಡಿ, ಡೇಟಾ ಸೆಕ್ಯುರಿಟಿ, ಮಾಹಿತಿ ಭದ್ರತೆ ಹಾಗೂ ಗ್ರಾಹಕರ ಯಶಸ್ಸಿನ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಉದ್ಯಮಿಯಾಗುವುದು ಸುಲಭದ ಕೆಲಸವಲ್ಲವಾದರೂ, ಸರಿಯಾದ ದೃಷ್ಟಿಕೋನ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂದು ಯುವಕರಿಗೆ ಪ್ರೇರಣೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಗೀರೀಶ್ ಬಡಿಗೇರ ಸ್ವಾಗತಿಸಿದರು. ದೀಪಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ ನಾಯಕ ವಂದಿಸಿದರು.