ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ: ರಾಜಶೇಖರ ಕಾರದಗಿ
ಲೋಕದರ್ಶನ ವರದಿ
ಸವದತ್ತಿ 23: ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರ ಬಾಕಿ ಉಳಿದಂತ ಸಂಬಳವನ್ನು ದೀಪಾವಳಿಯೊಳಗಾಗಿ ಸಂಪೂರ್ಣವಾಗಿ ನೀಡಬೇಕಿದ್ದು, ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳ ಕುರಿತು ಅಧಿಕಾರಿಗಳು ಗಮನ ಹರಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಹೇಳಿದರು.
ಸ್ಥಳೀಯ ಸವದತ್ತಿ ಯಲ್ಲಮ್ಮಾ ಪುರಸಭೆಯಿಂದ ಪುರಸಭೆ ಸಭಾಭವನದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ಪಟ್ಟಣದ ಶುಚಿತ್ವಕ್ಕಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದ್ದು, ಪೌರಕಾರ್ಮಿಕರು ಸಹ ತಮ್ಮ ಕೆಲಸದ ಬಗ್ಗೆ ಕಾಳಜಿ ವಹಿಸಿ ಪಟ್ಟಣವನ್ನು ಶುಚಿತ್ವವಾಗಿಟ್ಟು ತಮ್ಮ ಕರ್ತವ್ಯಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಮಾತನಾಡಿ, ಪೌರಕಾರ್ಮಿಕರಿಗೆ ಸರಕಾರದ ನಿಯಮಾವಳಿಯಂತೆ ಅವರಿಗೆ ಬೆಳಗಿನ ಉಪಹಾರ ಸೇರಿದಂತೆ ಕರ್ತವ್ಯದ ಸಮಯದಲ್ಲಿ ಅವರಿಗೆ ಸುರಕ್ಷತಾ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಪೌರಕಾರ್ಮಿಕರು ತಮ್ಮ ಕರ್ತವ್ಯದ ಸಮಯದಲ್ಲಿ ಪುರಸಭೆಯಿಂದ ಪೂರೈಸಿದ ಸುರಕ್ಷತಾ ಸಾಮಗ್ರಿಗಳನ್ನು ಬಳಸಿಕೊಂಡು ತಮ್ಮ ಕೆಲಸವನ್ನು ನಿರ್ವಹಿಸಬೇಕೆಂದರು. ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ನೌಕರರನ್ನು ಸಕ್ರಮಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅಂತವರನ್ನು ಕೂಡಲೆ ಸಕ್ರಮಗೊಳಿಸಲಾಗುತ್ತಿದೆ ಎಂದರು.
ಪುರಸಭೆ ಸಿಇಓ ಎಸ್.ವೈ.ಹಾದಿಮನಿ ಮಾತನಾಡಿ, ಪುರಸಭೆಯ 57 ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ಟಗಳನ್ನು ನೀಡಲಾಗಿದ್ದು, ಅವರಿಗೆ 4.63 ಲಕ್ಷ ರೂ.ಗಳ ವಿಮೆ ಅಳವಡಿಸಲಾಗಿದೆ. ಪೌರಕಾರ್ಮಿಕರಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಅವರ ಆರೋಗ್ಯದ ಕಾಳಜಿಯನ್ನು ಮಾಡಲಾಗುತ್ತಿದೆ ಎಂದರು.
ಶಿಕ್ಷಕ ನಾಗೇಶ ನಾಯಕ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಮತ್ತು ಉಪಾಧ್ಯಕ್ಷ ದೀಪಕ ಜಾನ್ವೇಕರ ಹಾಗೂ ಪೌರಕಾರ್ಮಿಕರಾದ ಹನಮಂತ ಮಾದರ, ಶಾರವ್ವ ಬನಹಟ್ಟಿ, ಅನುಸೂಯ ಬನಹಟ್ಟಿ, ದ್ಯಾಮಣ್ಣ ಕಾಳೆ, ಶಿವಾನಂದ ಜಂಬೂದ್ವೀಪ, ಹುಲಿಗೆಪ್ಪ ಮಾದರ, ಅರ್ಜುನ ಜಂಬೂದ್ವೀಪರನ್ನು ಸನ್ಮಾನಿಸಲಾಯಿತು.
ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಸದಸ್ಯರಾದ ಶಿವಾನಂದ ಹೂಗಾರ, ದ್ಯಾಮಣ್ಣ ಸುತಗಟ್ಟಿ, ವೀರೇಶ ಪ್ರಭುನವರ, ಐ.ಪಿ.ಪಾಟೀಲ,ಅರ್ಜುನ ಅಮ್ಮೋಜಿ, ಪ್ರವೀಣ ಮುನವಳ್ಳಿ, ಎಲ್.ಆರ್.ಕುಲಕರ್ಣಿ, ನಿಂಗಪ್ಪ ಬೆಟಸೂರ, ಬಾಬು ಕಾಳೆ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಆರ್.ದೇಸಾಯಿ ಉಪಸ್ಥಿತರಿದ್ದರು.
ಮೀನಾಕ್ಷಿ ಕಬ್ಬಿಣ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಭೀಮರಾಯ ಆನಿ ನಿರೂಪಿಸಿದರು. ಜೆ.ಜೆ.ಗಾಣಿಗೇರ ವಂದಿಸಿದರು.