ಕನ್ನಡವನ್ನು ಕಟ್ಟುವ ಕೆಲಸ ಮನೆಯಿಂದಲೇ ಪ್ರಾರಂಭವಾಗಬೇಕು
ಶಿಗ್ಗಾವಿ 02: ಕನ್ನಡವನ್ನು ಕಟ್ಟುವ ಕೆಲಸ ಮನೆಯಿಂದಲೇ ಪ್ರಾರಂಭವಾಗಿ, ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ನುಡಿಯನ್ನು ಉಳಿಸಿ ಬೆಳಸಲು ನಾವು ಸದಾ ಸಿದ್ದರಾಗಿರಬೇಕು ಎಂದು ತಾಲೂಕು ದಂಡಾಧಿಕಾರಿ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಇತಿಹಾಸದಲ್ಲಿ ಶಿಗ್ಗಾವಿ ತಾಲೂಕಿನ ಕೊಡುಗೆ ಅಪಾರವಾಗಿದ್ದು, ಸಂತ ಶಿಸುನಾಳ ಶರೀಫರು, ಕನಕದಾಸರು, ಹಿರಮಲ್ಲೂರ ಈಶ್ವರನರಂತಹ ಮಹನೀಯರೂ ಸೇರಿದಂತೆ ಅನೇಕ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕಾಣಿಕೆ ನೀಡಿದ್ದು, ದೊಡ್ಡಾಟ, ಬಯಲಾಟ ಸೇರಿದಂತೆ ಅನೇಕ ಜಾನಪದ ಕಲಾವಿಧರು ಕಲೆಯನ್ನು ಉಳಿಸಿ, ಬೆಳಸುತ್ತಿದ್ದಾರೆ. ತಾಲೂಕಿನ ಏಳು ಗಣ್ಯರು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದು, ಬಾಡದ ಅರಮನೆ, ನವಿಲು ಧಾಮ, ರಾಕ್ ಗಾರ್ಡನ್, ಅಗಡಿ ತೋಟ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಂತೆ, ಅನೇಕ ಪುಣ್ಯ ಕ್ಷೇತ್ರಗಳು ಜನರನ್ನು ತನ್ನತ್ತ ಆಕರ್ಶಿಸುತ್ತ ಈ ತಾಲೂಕು ವಿಶೇಷವಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ ಕುರಿತು ಅದ್ಭುತವಾಗಿ ಮಾತನಾಡಿ, 68ನೇ ಕನ್ನಡ ರಾಜ್ಯೋತ್ಸವಕ್ಕೆ ಕಳೆ ನೀಡಿದ ಜೇಕನಕಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಶಾಲೆಯ ಏಳನೆ ತರಗತಿಯ ವಿದ್ಯಾರ್ಥಿನಿ ಅನುಷ್ಯಾ ಹಿರೇಮಠ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗುರುಲಿಂಗಪ್ಪಾ ಛಲವಾದಿ ಮತ್ತು ಸಂಗಡಿಗರಿಂದ ವಿವಿಧ ಕನ್ನಡ ಗೀತೆಗಳ ಗಾಯನ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ, ತಾ.ಪಂ ಆಡಳಿತಾಧಿಕಾರಿ ಮಂಜುನಾಥ ಅಂತರವಳ್ಳಿ, ಆರಕ್ಷಕ ಉಪಾಧೀಕ್ಷರು ಮಂಜುನಾಥ ಜಿ., ತಾ.ಪಂ ಇ.ಓ ಪಾಲಯ್ಯನಕೋಟೆ ವಿಶ್ವನಾಥ, ಬಿ.ಇ.ಓ ಎಂ.ಬಿ.ಅಂಬಿಗೇರ, ವೃತ್ತ ಆರಕ್ಷಕ ನೀರೀಕ್ಷಕ ಸತ್ಯಪ್ಪಾ ಮಾಳಗೊಂಡ, ಅರುಣ ಹುಡೇದಗೌಡ್ರ, ಜೈದೇವ ಅಗಡಿ, ಶಿವಾನಂದ ಮ್ಯಾಗೇರಿ, ತಿಪ್ಪಣ್ಣಾ ಸಾತಣ್ಣವರ, ಡಾ.ಮಲ್ಲೇಶಪ್ಪಾ ಹರಿಜನ, ಸಂಗಮೇಶ ಕಂಬಾಳಿಮಠ, ಕನ್ನಡಪರ ಹೋರಾಟಗಾರರು, ಗಣ್ಯರು, ತಾಲೂಕಿನ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.