ಯೋಧರ ಕಾರ್ಯ ಚಿರಸ್ಮರಣೀಯ
ನೀಲಕಂಠ ಮಹಾಸ್ವಾಮೀಜಿ ಅಭಿಮತ: 500 ಮಾಜಿ ಸೈನಿಕ ದಂಪತಿಗಳ ಸನ್ಮಾನ ಕಾರ್ಯಕ್ರಮ
ಬೈಲಹೊಂಗಲ 14: ದೇಶ ರಕ್ಷಣೆ ಮಾಡುತ್ತಿರುವ ಯೋಧರನ್ನು ನಾವು ಸದಾಕಾಲ ನೆನೆಯಬೇಕು. ದೇಶದ ಗಡಿಭಾಗದಲ್ಲಿ ಜೀವದ ಹಂಗು ತೊರೆದು ದೇಶವನ್ನು ರಕ್ಷಣೆ ಮಾಡಿ ದೇಶದ ಭದ್ರತೆಯೊಂದಿಗೆ ನಮ್ಮನ್ನು ರಕ್ಷಿಸುತ್ತಿರುವ ಯೋಧರ ಕಾರ್ಯ ಚಿರಸ್ಮರಣೀಯವಾದುದು ಎಂದು ಮುರಗೋಡ ದುರದುಂಡೀಶ್ವರಮಠದ ಪೀಠಾಧಿಪತಿ ನೀಲಕಂಠ ಮಹಾಸ್ವಾಮೀಜಿಯವರು ಹೇಳಿದರು.
ಪಟ್ಟಣದ ಬಸವನಗರದಲ್ಲಿರುವ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ ಯಾತ್ರಾ ಮಹೋತ್ಸವ ಹಾಗೂ ಶ್ರೀ ಮಾತಾ ಸಂಭ್ರಮ 2021 ಕಾರ್ಯಕ್ರಮದಂಗವಾಗಿ ನಡೆದ 500 ಮಾಜಿ ಸೈನಿಕ ದಂಪತಿಗಳ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಸರಕಾರದ ನಿಯಮಾವಳಿಯಂತೆ ಸರಳವಾಗಿ ಶ್ರೀದುರ್ಗಾ ಮಾತಾ ಸಂಭ್ರಮ ಕಾರ್ಯಕ್ರಮಗಳು ದೇವಿ ಆರಾಧಕ ಡಾ. ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ ಅವರ ಮಾರ್ಗದರ್ಶನದಲ್ಲಿ ನಾಡಿನ ಹರಚರಣಮೂರ್ತಿಗಳ ಸನ್ನಿಧಿಯಲ್ಲಿ ಭಕ್ತ ವೃಂದದ ಮದ್ಯೆ ನಡೆಯುತ್ತಿದೆ.
ಸಾನಿಧ್ಯವನ್ನು ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವದಿಸಿ ಕಳೆದ 12 ವರ್ಷಗಳಿಂದ ದುರ್ಗಾಮಾತಾ ಮಠದಿಂದ ಮಹಾಂತಯ್ಯ ಶಾಸ್ತ್ರೀಗಳು ಈ ಭಾಗದ ಭಕ್ತರಿಗೆ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಪ್ರತಿವರ್ಷ ವಿವಿಧ ಸಾಧಕರನ್ನು ಕರೆಸಿ ಸತ್ಕಾರ ಮಾಡುತ್ತಿದ್ದರು. ದೇಶ ರಕ್ಷಣೆ ಮಾಡುವಂತಹ ಸೈನಿಕರ ಬಗ್ಗೆ ಕಿಂಚಿತ್ತೂ ವಿಚಾರ ಮಾಡದ ಈ ಸಂದರ್ಭದಲ್ಲಿ 500 ಮಾಜಿ ಸೈನಿಕ ದಂಪತಿಗಳನ್ನು ಗುರುತಿಸಿ ವೇದಿಕೆ ಕರೆ ತಂದು ಸನ್ಮಾನಿಸಿದ ಕಾರ್ಯ ರಾಜ್ಯ ಮತ್ತು ರಾಷ್ಟ್ರಕ್ಕೆ ಗೌರವ ತರುವಂತಹ ಕೆಲಸವಾಗಿದೆ. ಇಂತಹ ಕಾರ್ಯ ಮಾಡುತ್ತಿರುವ ಡಾ. ಮಹಾಂತಯ್ಯ ಶಾಸ್ತ್ರೀಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಮಾರಂಭದಲ್ಲಿ ಪಾರು ಧಾರಾವಾಹಿ ನಟಿ ವೈಷ್ಣವಿ, ಸತ್ಯ ಧಾರಾವಾಹಿ ನಟಿ ಗೌತಮಿ, ಸರಿಗಪ ಖ್ಯಾತಿಯ ಗಾಯಕ ಹಣಮಂತ ಲಮಾಣಿ, ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ, ಜಾನಪದ ಹಾಡುಗಾರ್ತಿ ಶೈಲಾ ಹಿರೇಮಠ ಅತಿಥಿಗಳಾಗಿ ಆಗಮಿಸಿ ಪ್ರೇಕ್ಷಕರನ್ನು ರಂಜಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಧಾರವಾಡದ ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ವಹಿಸಿದ್ದರು. ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಮಹಾಸ್ವಾಮೀಜಿ, ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಮುತ್ನಾಳ ಜಗದ್ಗುರು ಕೇದಾರ ಶಾಖಾ ಮಠದ ಶಿವಾನಂದಶಿವಾಚಾರ್ಯ ಮಹಾಸ್ವಾಮೀಜಿ, ಚಿಕ್ಕಮುನವಳ್ಳಿ ಆರೂಡಮಠದ ಶಿವಪುತ್ರ ಮಹಾಸ್ವಾಮೀಜಿ ಸಮ್ಮುಖ ವಹಿಸಿ ಆಶೀರ್ವದಿಸಿದರು.
ಬೆಳಗಾವಿ ಶ್ರೀರಾಮಸೇನೆ ಹಿಂದೂಸ್ತಾನ ಸಂಸ್ಥಾಪಕ ರಮಾಕಾಂತ ಕೊಂಡುಸ್ಕರ, ಪ್ರಗತಿಪರ ರೈತರಾದ ಮಲ್ಲಿಕಾರ್ಜುನ ಬೋಳನ್ನವರ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಪಾಂಡಪ್ಪ ಇಂಚಲ, ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ ಆಗಮಿಸಿದ್ದರು.
ಜಾತ್ರಾ ಅಂಗವಾಗಿ ಅಮ್ಮನವರಿಗೆ ಅಭಿಷೇಕ, ಕುಂಕುಮಾರ್ಚನೆ ,ಗಣಪತಿ ಪೂಜೆ, ಭೈರವ ಹೋಮ, ನವಗ್ರಹ ಮಂಡಲ ಆರಾಧನೆ ಜರುಗಿತು.
ಜಾತ್ರಾ ಕಮೀಟಿ ಉಪಾದ್ಯಕ್ಷ ಸುಭಾಸ ತುರಮರಿ ಸ್ವಾಗತಿಸಿದರು. ಶೈಲಾ ಕೋಕರಿ ನಿರೂಪಿಸಿ, ವಂದಿಸಿದರು.