ಆಂಧ್ರದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಕೇರಳದ ಮೂವರ ಬಂಧನ; 25 ಲಕ್ಷ ರೂ.ಮೌಲ್ಯದ ಗಾಂಜಾ ವಶ
ಬೆಂಗಳೂರು, ಸೆಪ್ಟೆಂಬರ್.30: ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಕೇರಳದ ಮೂವರು ಆರೋಪಿಗಳನ್ನು ಬಂಧಿಸಿರುವ ಜೆ.ಸಿ.ನಗರ ಪೊಲೀಸರು ಆರೋಪಿಗಳಿಂದ 25 ಲಕ್ಷ ರೂ.ಮೌಲ್ಯದ ಗಾಂಜಾ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕಣ್ಣೂರು ಶ್ರೀಕಂಠಪುರಂ ಕೈದಪುರಂ ನಿವಾಸಿ, ಬೆಂಗಳೂರಿನ ಕಾಡುಗೋಡಿ ಪೃಥ್ವಿ ಲೇಔಟ್ ಪ್ರಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಜಿಂಡೋ ಜೇಮ್ಸ್ (29), ಕೇರಳದ ಕಣ್ಣೂರು ಜಿಲ್ಲೆಯ ಫಾರಾ ಆಳ್ಳುಂಗನ ಹೌಸ್ ನಿವಾಸಿ ಬೆಂಗಳೂರಿನ ಅತ್ತಿಬೆಲೆ ಟಿವಿಎಸ್ ರಸ್ತೆ ಕ್ವೀನ್ ವ್ಯಾಲಿ ರೆಸಿಡೆನ್ಸ್ ನಿವಾಸಿ ಆದರ್ಶ (27) ಮತ್ತು ಕಣ್ಣೂರು ಜಿಲ್ಲೆಯ ಅಸಾನಕವಲಾ ವೆಲ್ಲಡ್ ಪೊನ್ನಾಟಿಲ್ ಹೌಸ್ ನಿವಾಸಿ ಬೆಂಗಳೂರಿನ ಅತ್ತಿಬೆಲೆಯ ಟಿವಿಎಸ್ ರಸ್ತೆಯ ಕ್ವೀನ್ ವ್ಯಾಲಿಯಲ್ಲಿ ನೆಲೆಸಿದ್ದ ಇನ್ಮೇಶ್ (32) ಬಂಧಿತ ಆರೋಪಿಗಳು.
ಜೆ.ಸಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೋರ್ ಬಂಕ್ ರಸ್ತೆಯ ಬಳಿ ಕಾರಿನಲ್ಲಿ ಮೂವರು ಗಾಂಜಾ ಮತ್ತು ಎಂಡಿಎಂಎ ಎಂಬ ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಭಾತ್ಮೀದಾರರು ನೀಡಿದ ಮಾಹಿತಿಯ ಆಧಾರದಲ್ಲಿ ಜೆ.ಸಿ.ನಗರ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 45 ಕೆ.ಜಿ.ಗಾಂಜಾ, 70 ಗ್ರಾಂ ಎಂಡಿಎಂಎ, 1000 ರೂ.ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಜೆ.ಸಿ.ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳು ಈ ಹಿಂದೆ ಗಾಂಜಾವನ್ನು ಲೂಬಿನ್ ಅಮಲ್ ನಾಥ್ ಎಂಬಾತನಿಂದ ಖರೀದಿಸಿ, ಸೇವನೆ ಮಾಡಿದ್ದರು. ನಾವು ಕೂಡ ಇದೇ ರೀತಿ ಗಾಂಜಾ ಮಾರಾಟ ಮಾಡಬೇಕೆಂದು ಲೂಬಿನ್ ನಲ್ಲಿ ಕೇಳಿಕೊಂಡಿದ್ದಾರೆ. ಆಗ ಆತ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ತರುವುದಾಗಿ ತೋರಿಸಿಕೊಟ್ಟಿದ್ದಾನೆ. ಲೂಬಿನ್ ಅಮಲ್ ನಾಥ್ ಪ್ರಸ್ತುತ ಜಾಲಹಳ್ಳಿ ಪೊಲೀಸ್ ಠಾಣೆಯ ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲುಸೇರಿದ್ದಾನೆ.
ಆರೋಪಿಗಳು ವಿಶಾಖಪಟ್ಟಣಂನಿಂದ ವ್ಯಕ್ತಿಯೊಬ್ಬರಿಂದ ಖರೀದಿಸಿದ ಗಾಂಜಾವನ್ನು ಗೂಡ್ಸ್ ಟ್ರಕ್ ಮತ್ತು ಕಾರಿನಲ್ಲಿ ತಂದು ಅತ್ತಿಬೆಲೆಯಲ್ಲಿ ತಾವು ವಾಸವಿರುವ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು, ಸ್ವಲ್ಪ ಸ್ವಲ್ಪ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ.
ಆರೋಪಿಗಳು ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ 5 ಕೆ.ಜಿ.ಗಾಂಜಾವನ್ನು ಮತ್ತು 20 ಎಂಡಿಎಂಎ ಯನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಕೈಗೊಳ್ಳಲಾಗಿದೆ. ಮಾತ್ರವಲ್ಲ ಆರೋಪಿಗಳ ಮನೆಯಿಂದ 40 ಗಾಂಜಾ ಮತ್ತು 50 ಗ್ರಾಂ ಎಂಡಿಎಂಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎಂಡಿಎಂಎ ಮಾದಕ ವಸ್ತುವನ್ನು ಕೊತ್ತನೂರು ಬಳಿ ನೈಜೀರಿಯಾ ವ್ಯಕ್ತಿಯೊಬ್ಬನಿಂದ ಖರೀದಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಜೆ.ಸಿ.ನಗರ ಸಿಪಿ ರೀನಾ ಸುವರ್ಣ ಅವರ ಮಾರ್ಗದರ್ಶನದಲ್ಲಿ ಜೆ.ಸಿ.ನಗರ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಆರ್.ನಾಗರಾಜ್ ಅವರ ನೇತೃತ್ವದಲ್ಲಿ ಪಿಎಸ್ಐ ವಿನೋದ್ ಜಿರಗಾಳೆ, ನೇಮಿನಾಥ್ ಠಕಾಯಿ, ಪಿಎಸ್ಐ ರಘುಪತಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.