ಸಿಂಧಗಿ

ಎಲ್ಲ ಸಮೂದಾಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ: ಶಾಸಕ ಮನಗೂಳಿ

ಎಲ್ಲ ಸಮೂದಾಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ: ಶಾಸಕ ಮನಗೂಳಿ

ಸಿಂದಗಿ 9:  ಅಲ್ಪ ಸಂಖ್ಯಾತರ ಹಿತ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ತಾಲೂಕಿನ ಮೋರಟಗಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗ್ರಾಮದಲ್ಲಿ ಮಂಜೂರಾದ ಶಾದಿಮಹಲ್ ಕಟ್ಟಡಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನೀಡಲಾದ ವಾಗ್ದಾನದಂತೆ ನಡೆದುಕೊಂಡು ಮಲಘಾಣ ಹಾಗೂ ಮೋರಟಗಿ ಗ್ರಾಮಗಳಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಿ ಅನುದಾನ ತರಲಾಗಿದೆ. ಪ್ರಸಕ್ತ ವರ್ಷ ರಾಜ್ಯದ 224 ಮತಕ್ಷೇತ್ರಗಳ ಪೈಕಿ ಸಿಂದಗಿ ಮತಕ್ಷೇತ್ರದಲ್ಲಿ ಮಾತ್ರ ಎರಡು ಶಾದಿಮಹಲ್‌ಗಳನ್ನು ಮಂಜೂರು ಮಾಡಲಾಗಿದ್ದು, ನಾವೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಅವರಿಗೆ ಋಣಿಯಾಗಿರಬೇಕು ಎಂದರು. 

ಸಿಂದಗಿ ಮತಕ್ಷೇತ್ರ ವ್ಯಾಪ್ತಿಯ ಯರಗಲ್ ಬಿ.ಕೆ., ರಾಂಪುರ ಹಾಗೂ ಚಟ್ಟರಕಿ ಗ್ರಾಮಗಳಲ್ಲೂ ಶಾದಿಮಹಲ್ ಮಂಜೂರು ಹಂತದಲ್ಲಿವೆ. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಪ್ರತಿ ಮತಕ್ಷೇತ್ರಕ್ಕೂ ಮೂರ್ನಾಲ್ಕು ಶಾದಿಮಹಲ್ ಮಂಜೂರು ಮಾಡಿದ್ದರು. ನಂತರ 2019 ರಿಂದ 2023ರವರೆಗೆ ಬಿಜೆಪಿ ಸರ್ಕಾರ ಒಂದು ಶಾದಿಮಹಲಗಳನ್ನೂ ಮಂಜೂರು ಮಾಡಲಿಲ್ಲ. ನಮ್ಮ ಸರ್ಕಾರ ಮಂಜೂರು ಮಾಡಿದ್ದ ಕಾಮಗಾರಿಗಳ ಅನುದಾನ ಬಿಡುಗಡೆಗೂ ಅಡ್ಡಿ ಮಾಡಿತು. ಸದ್ಯ ನಮ್ಮ ಸರ್ಕಾರ ಅಲ್ಪಸಂಖ್ಯಾತರಿಗೆ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಅವರ ಶೈಕ್ಷಣಿಕ ಅಭಿವೃದ್ಧಿಗೂ ಬದ್ಧವಾಗಿದೆ. ಅಲ್ಪಸಂಖ್ಯಾತರು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಮುಂದೆ ಬಂದು  ಪ್ರಬುದ್ಧ ಭಾರತ ನಿರ್ಮಿಸಲು ಕೈಜೋಡಿಸಬೇಕು ಎಂದರು. 

ಅಂಜುಮನ್ ಸಮಿತಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ ಮಾತನಾಡಿ, ಬಹುದಿನಗಳ ಬೇಡಿಕೆ ಈಡೇರಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಶಾಸಕರು ವಿಶೇಷವಾಗಿ ಪ್ರಯತ್ನಿಸಿರುವುದು ಹೆಮ್ಮೆಯ ಸಂಗತಿ ಎಂದರು.   

ಈ ಸಂದರ್ಭದಲ್ಲಿ ಸಮಸ್ತ ಅಂಜುಮನ್ ಸಮಿತಿ ವತಿಯಿಂದ ಶಾಸಕರನ್ನು ವಿಶೇಷವಾಗಿ ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ಮಾಜಿ ಜಿ ಪಂ ಸದಸ್ಯ  ನರಸಿಂಗ್ ಪ್ರಸಾದ್ ತಿವಾರಿ, ವೀರನಗೌಡ ಪಾಟೀಲ್, ನಿಂಗನಗೌಡ ಪಾಟೀಲ, ಗಂಗಣ್ಣ ಚಿಂಚೋಳಿ, ಪ್ರಕಾಶ ಅಡಗಲ್, ಮುತ್ತಪ್ಪ ಸಿಂಗೆ, ಅರವಿಂದ ಹಂಗರಗಿ, ರವಿಕಾಂತ ನಡುವಿನಕೇರಿ, ಇಸುಫ್ ಮುಲ್ಲಾ, ಸಾಯಿಪಟೇಲ್ ಅವಟಿ, ರಜಾಕ ಬಾಗವಾನ, ಸಲೀಮ್ ಕಣ್ಣಿ, ಖಾದರ ಬಂಕಲಗಿ, ಸಾಹೇಬಗೌಡ ಅವಟಿ, ಅಬ್ಬಾಸಲಿ ಬಂಟನೂರ, ಅಬ್ಬಾಸಲಿ ಬಳೂರಗಿ, ಹಸನಸಾಬ ಶಿರಾಶ್ಯಾಡ, ಬಾಬು ಬಾಸಗಿ, ಮಾಬಣ್ಣ ಗೊಗಾಡಿ, ಮತ್ತಿತರರು ಇದ್ದರು. 


ಸುದ್ದಿ ಓದಿ