ಸರಕಾರ ಜಾರಿಗೊಳಿಸಿರುವ ನಿಯಮ ಪ್ರಜಾಪ್ರಭುತ್ವ ವಿರೋಧಿ
ಲೋಕದರ್ಶನ ವರದಿ
ಸವದತ್ತಿ 19: ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಅಧಿಕಾರದಿಂದ ಮುಕ್ತಗೊಳಿಸುವ ಮತ್ತು ತೆಗೆದುಹಾಕುವ ನಿಯಮವನ್ನು ಇದೀಗ ಸರಕಾರ ಜಾರಿ ಮಾಡಿದ್ದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ರಾಜ್ಯ ಉಪಾಧ್ಯಕ್ಷ ಗಂಗಯ್ಯ ಅಮೋಘಿಮಠ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಈ ನಿಯಮದಿಂದ ಪಿಡಿಒ ಹೊರತು ಪಡಿಸಿ ಮೇಲಿನ ಎಲ್ಲ ಅಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸದಸ್ಯರ ಮೇಲೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಅಧಿಕಾರ ನೀಡಿದಂತಾಗಿದೆ. ಸಧ್ಯ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸುವ ಕಾರ್ಯ ಆಯಾ ಹಿರಿಯ ಚುನಾಯಿತ ಪ್ರತಿನಿಧಿಗಳು ನಿಭಾಯಿಸುತ್ತಿದ್ದಾರೆ. ಇದೀಗ ಸರಕಾರದಿಂದ ಜಾರಿಯಾದ ನಿಯಮದಿಂದ ಚುನಾಯಿತ ಜನಪ್ರತಿನಿಧಿಗಳ ಹಕ್ಕನ್ನು ಅಧಿಕಾರಿಗಳು ತಮ್ಮ ಮನಬಂದಂತೆ ನಡೆಸುವಂತಾಗುತ್ತದೆ.
ಕಾರಣ ಈ ನಿಯಮವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟ ಪ್ರಬಲವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರಕ್ಕೆ ಈ ವಿರೋಧವನ್ನು ಪತ್ರಮುಖೇನ ತಿಳಿಸಲಾಗುತ್ತದೆ. ಇದನ್ನು ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವದೆಂದು ತಿಳಿಸಿದ್ದಾರೆ.