ಸ್ಥಳೀಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಸಾರ್ವಜನಿಕರು
ಆರೋಗ್ಯ ಸೇವೆ ಇಲ್ಲದೆ ಪರದಾಡುತ್ತಿರುವ ಚಿಕ್ಕೋಡಿ ತಾಲೂಕಿನ ಜನತೆ:
ಚಿಕ್ಕೋಡಿ 04: ಜನಪ್ರತಿನಿಧಿಗಳು ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ತಾಲೂಕಿನ ಕೇರೂರ, ಕಾಡಾಪೂರ ಮತ್ತು ಜೋಡಕುರಳಿ ಗ್ರಾಮದ ಜನರು ಸಮರ್ಕ ಆರೋಗ್ಯ ಸೇವೆಯಿಂದ ವಂಚಿತಗೊಂಡಿದ್ದಾರೆ. ಕೇರೂರ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸ್ಟಾಫ್ ನರ್ಸ್ ಕೊರತೆಯಿಂದ ಸೂಕ್ತ ಚಿಕಿತ್ಸೆ ಇಲ್ಲದೇ ಜನ ಪರದಾಡುವಂತಾಗಿದೆ.
ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮವು ಅತೀ ದೊಡ್ಡದಾದ ಗ್ರಾಮ. ಸುಮಾರು 41 ಗ್ರಾಮ ಪಂಚಾಯತ್ ಸದಸ್ಯರನ್ನೊಳ್ಳಗೊಂಡ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು, ಇಲ್ಲಂದತಾಗಿದೆ. ಕೇರೂರ, ಕಾಡಾಪೂರ, ಜೋಡಕುರಳಿ ಮುಂತಾದ ಗ್ರಾಮಗಳು ಈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುತ್ತಿದೆ. ಆಸ್ಪತೆಯ ವ್ಯಾಪ್ತಿಯಲ್ಲಿ ಸುಮಾರು 40 ಸಾವಿರ ಕ್ಕಿಂತ ಹೆಚ್ಚಿನ ಜನಸಂಖ್ಯೆ ಇದ್ದರೂ ಓರ್ವ ವೈದ್ಯರು ಮಾತ್ರ ಇರುವುದರಿಂದ ಸೂಕ್ತ ಚಿಕಿತ್ಸೆ ಎಂಬುದು ಕನಸಿನ ಮಾತಾಗಿದೆ.
ಕೋವಿಡ್ದಲ್ಲಿ ನರಳಿ ನರಳಿ ಪ್ರಾಣ ಬಿಟ್ಟ ಸೋಂಕಿತರು: ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಚಿಕ್ಕೋಡಿ ತಾಲೂಕಿನಲ್ಲಿ ಹರಡಿಕೊಂಡಿದ್ದರಿಂದ ಸಮರ್ಕ ಚಿಕಿತ್ಸೆ ಇಲ್ಲದೇ ಸೋಂಕಿತರು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಸರಕಾರದ ಅಂಕಿ ಅಂಶದ ಪ್ರಕಾರ 15 ರಿಂದ 20 ಜನರು ಮೃತರಾಗಿದ್ದಾರೆ ಎಂಬುದು ವರದಿಯಾಗಿದೆ. ಆದರೆ ಗ್ರಾಮದಲ್ಲಿ ಕೋವಿಡ್ ಮತ್ತು ವಿವಿಧ ಕಾಯಿಲೆಗಳಿಂದ ಸುಮಾರು ನೂರಕ್ಕಿಂತ ಹೆಚ್ಚಿನ ಜನರು ಮೃತರಾಗಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.
ಕೇರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಜೋಡಕುರಳಿ, ಕಾಡಾಪೂರ ಗ್ರಾಮಗಳು ವ್ಯಾಪ್ತಿಗೆ ಬರುತ್ತಿವೆ. ಇಲ್ಲಿಯೂ ಪ್ರತ್ಯೇಕ ಗ್ರಾಮ ಪಂಚಾಯತಿಗಳು ಇರುವುದರಿಂದ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮಗಳಾಗಿವೆ. ಕೇರೂರ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಕೋವಿಡ್ದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇರುವ ಪರಿಣಾಮ ಸಾವಿರಾರು ಜನರು ಅನಾರೋಗ್ಯಕ್ಕಿಡಾಗಿದ್ದಾರೆ. ಆದರೆ ಇಲ್ಲಿಯ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಳಾಗಲಿ ವ್ಯವಸ್ಥೆ ಸರಿಪಡಿಸಲು ಮುಂದಾಗಿಲ್ಲ ಎಂಬುದು ಗ್ರಾಮದ ಜನರ ಆಕ್ರೋಶವಾಗಿದೆ.
ನುರಿತ ವೈದ್ಯರ ನೇಮಕಕ್ಕೆ ಆಗ್ರಹ: ಕೇರೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಓರ್ವ ಆಯುಷ್ಯ ವೈದ್ಯರು ಇದ್ದಾರೆ. ಓರ್ವ ವೈದ್ಯ ಮೂರು ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವಾಗದ ಮಾತು. ಹೀಗಾಗಿ ಈ ಆಸ್ಪತ್ರೆಯಲ್ಲಿ ನುರಿತ ಎಂಬಿಬಿಎಸ್ ವೈದ್ಯರು ನೇಮಕ ಮಾಡಲು ಚುನಾಯಿತ ಪ್ರತಿನಿಧಿಗಳು,ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸೂಕ್ತ ಗಮನ ಹರಿಸಿ ಕೇರೂರ, ಜೋಡಕುರಳಿ ಮತ್ತು ಕಾಡಾಪೂರ ಗ್ರಾಮಗಳ ಆರೋಗ್ಯ ಸಮಸ್ಯೆ ನಿವಾರಿಸಬೇಕು ಎಂದು ಗ್ರಾಮದ ಯುವಕ ರವೀಂದ್ರ ಪಾಟೀಲ ಒತ್ತಾಯಿಸಿದ್ದಾರೆ.
ಕಾಡಾಪೂರ ಗ್ರಾಮದಲ್ಲಿ ಪ್ರತ್ಯೇಕ ಗ್ರಾಮ ಪಂಚಾಯತಿ ಇದೆ. ಇಲ್ಲಿಯು ಮೂರನಾಲ್ಕು ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಆಗುವುದು ಅವಶ್ಯಕವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಅರ್ಜುನ ಗುರುನಾಥ.
ಕೇರೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓರ್ವ ಎಂಬಿಬಿಎಸ್ ವೈದ್ಯರ ನೇಮಕ ಕುರಿತು ಸರ್ಕಾಕ್ಕೆ ಮಾಹಿತಿ ನೀಡಲಾಗಿದೆ. ಬರುವ ಹದಿನೈದು ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ, ವಿಠ್ಠಲ ಶಿಂದೆ ತಿಳಿಸಿದರು.